ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ವೃದ್ಧಾಶ್ರಮದಲ್ಲೇ ತಂದೆಯ ದಾರುಣ ಸಾವು: ಅಂತ್ಯಕ್ರಿಯೆಗೂ ಬಾರದ ಮೂವರು ಶಿಕ್ಷಕಿ ಮಕಳು, ವಿಡಿಯೋ ಕಾಲಿನಲ್ಲೇ ಅಂತಿಮ ದರ್ಶನ!

 



ಸೋನಿಪತ್ (ಹರಿಯಾಣ):

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಉತ್ತಮ ಭವಿಷ್ಯ ರೂಪಿಸಿದ ತಂದೆಯೊಬ್ಬರ ಕೊನೆಯ ದಿನಗಳು ಅನಾಥಾಶ್ರಮದಲ್ಲೇ ಕಳೆದುಹೋಗಿದ್ದು, ಅವರು ನಿಧನರಾದಾಗ ಅಂತಿಮ ಸಂಸ್ಕಾರಕ್ಕೂ ಬಾರದೆ ಮೂವರು ಹೆಣ್ಣುಮಕ್ಕಳು ವಿಡಿಯೋ ಕರೆಯಲ್ಲಿ ವೀಕ್ಷಿಸಿದ ಕರುಣಾಜನಕ ಘಟನೆ ಬೆಳಕಿಗೆ ಬಂದಿದೆ.

ಮುಂಬೈನ ಮಾಜಿ ಜವಳಿ ವ್ಯಾಪಾರಿಯಾಗಿದ್ದ ಶಿವಚರಣ್ ರಾಮರತನ್ ಗುಪ್ತಾ (74) ಅವರು ಹರಿಯಾಣದ ಸೋನಿಪತ್‌ನಲ್ಲಿರುವ ವೃದ್ಧಾಶ್ರಮದಲ್ಲಿ ನಿಧನರಾದ ದುರ್ದೈವಿ ತಂದೆ.

ಸಮಯವಿಲ್ಲವೆಂದು ಅಂತ್ಯಕ್ರಿಯೆಗೆ ಬರಲು ನಿರಾಕರಣೆ:

ಶಿವಚರಣ್ ಅವರು ನಿಧನರಾಗುತ್ತಿದ್ದಂತೆ ಆಶ್ರಮದ ಆಡಳಿತ ಮಂಡಳಿಯು ಅವರ ಮೂವರು ಪುತ್ರಿಯರಿಗೆ ವಿಷಯ ಮುಟ್ಟಿಸಿದೆ. ಆದರೆ ಸಮಯ ಹಾಗೂ ದೂರದ ನೆಪವೊಡ್ಡಿದ ಮಕ್ಕಳು, ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ.

ಹಿರಿಯ ಮಗಳು ಅನಿತಾ ನೇಪಾಳದಲ್ಲಿ, ಎರಡನೇ ಮಗಳು ನಿಶಾ ಉತ್ತರ ಪ್ರದೇಶದ ಅಜಮ್‌ಗಢದಲ್ಲಿ ಹಾಗೂ ಕಿರಿಯ ಮಗಳು ಪ್ರಿಯಾ ಮುಂಬೈನಲ್ಲಿ ಶಿಕ್ಷಕಿಯರಾಗಿ ಉದ್ಯೋಗದಲ್ಲಿದ್ದಾರೆ. ತಂದೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ 20 ದಿನಗಳ ಮುಂಚಿತವಾಗಿಯೇ ಆಶ್ರಮದ ಸಿಬ್ಬಂದಿ ಮಾಹಿತಿ ನೀಡಿದ್ದರೂ, ಮಕ್ಕಳು ಅವರನ್ನು ನೋಡಲು ಬರಲಿಲ್ಲ ಎಂದು ಆಶ್ರಮದ ಆಡಳಿತಾಧಿಕಾರಿ ಆನಂದ್ ಬೇಸರ ವ್ಯಕ್ತಪಡಿಸಿದ್ದಾರೆ.

ಚಿತಾಭಸ್ಮ ವಿಸರ್ಜನೆಗೂ ಆಶ್ರಮಕ್ಕೇ ಮನವಿ:

ಅಂತ್ಯಕ್ರಿಯೆಯಲ್ಲಿ ಖುದ್ದಾಗಿ ಭಾಗವಹಿಸದ ಮಕ್ಕಳು ವಿಡಿಯೋ ಕಾಲ್ ಮೂಲಕವೇ ಅಂತಿಮ ವಿಧಿವಿಧಾನಗಳನ್ನು ವೀಕ್ಷಿಸಿದರು. ಬಳಿಕ ಹಿರಿಯ ಮಗಳು ಆನ್‌ಲೈನ್ ಮೂಲಕ ಆಶ್ರಮದ ಅಧಿಕಾರಿಗೆ ₹5,100 ಕಳುಹಿಸಿ, ಸೋನಿಪತ್‌ನಲ್ಲೇ ದಹನ ಸಂಸ್ಕಾರ ಪೂರ್ಣಗೊಳಿಸಿ ಅದರ ವಿಡಿಯೋ ಕಳುಹಿಸುವಂತೆ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ, ಚಿತಾಭಸ್ಮವನ್ನು ಪಡೆಯಲೂ ಸಹ ತಮ್ಮ ಬಳಿ ಸಮಯವಿಲ್ಲ ಎಂದು ಹೇಳಿ, ಆಶ್ರಮದವರೇ ಗಂಗಾನದಿಯಲ್ಲಿ ಚಿತಾಭಸ್ಮ ವಿಸರ್ಜನೆ ಮಾಡುವಂತೆ ವಿನಂತಿಸಿಕೊಂಡಿದ್ದಾರೆ.

ಮರಣದ ನಂತರವೂ ಇಬ್ಬರ ಬಾಳಿಗೆ ಬೆಳಕಾದ ತಂದೆ!

ಜೀವಮಾನವಿಡೀ ಮಕ್ಕಳ ಪ್ರೀತಿ-ವಾತ್ಸಲ್ಯಕ್ಕಾಗಿ ಹಂಬಲಿಸುತ್ತಿದ್ದ ಶಿವಚರಣ್ ಅವರು, ಜೀವಂತವಾಗಿದ್ದಾಗಲೇ ತಮ್ಮ ನೇತ್ರದಾನ ಮಾಡುವುದಾಗಿ ವಾಗ್ದಾನ ಮಾಡಿದ್ದರು. ಅವರ ಇಚ್ಛೆಯಂತೆ ನಿಧನದ ನಂತರ ವೈದ್ಯರ ತಂಡವು ಆಶ್ರಮಕ್ಕೆ ಆಗಮಿಸಿ ಅವರ ಕಣ್ಣುಗಳನ್ನು ಸ್ವೀಕರಿಸಿದ್ದು, ಮರಣದ ನಂತರವೂ ಅವರು ಇಬ್ಬರ ಬಾಳಿಗೆ ಬೆಳಕಾಗಿದ್ದಾರೆ.