ಮುಲ್ಕಿ: ಕಾಮಗಾರಿ ಸ್ಥಳದಲ್ಲಿ ಇರಿಸಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಿದ್ಯುತ್ ಪ್ರಸರಣ ಸಾಮಗ್ರಿಗಳನ್ನು ದುಷ್ಕರ್ಮಿಗಳು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಮುಲ್ಕಿ ತಾಲೂಕಿನ ಉಳೆಪಾಡಿಯಲ್ಲಿ ಬೆಳಕಿಗೆ ಬಂದಿದೆ.
ಉಡುಪಿ–ಕಾಸರಗೋಡು ಟ್ರಾನ್ಸ್‌ಮಿಷನ್ ಲಿಮಿಟೆಡ್ (UKTL) ಯೋಜನೆಯಡಿ ಡ್ರೋನ್ ಆಧಾರಿತ ಲೈನ್ ನಿರ್ಮಾಣ ಕಾಮಗಾರಿ ನಡೆಸುತ್ತಿರುವ 'ಇನ್ಫ್ರಾವಿಷನ್ ಟ್ರಾನ್ಸ್‌ಮಿಷನ್ ಸೊಲ್ಯೂಷನ್ಸ್' ಸಂಸ್ಥೆಯ ಸೈಟ್ ಮ್ಯಾನೇಜರ್ ರಮೇಶ್ ಗುರುಸ್ವಾಮಿ ಅವರು ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಡೆದಿದ್ದೇನು?
ಜುಲೈ 27 ರಂದು ಸಂಜೆ 5 ಗಂಟೆಗೆ ಉಳೆಪಾಡಿ ಬಳಿಯ ಟವರ್ ನಂಬ್ರ 271/4 ರ ಕಾಮಗಾರಿ ಸ್ಥಳಕ್ಕೆ ಅಗತ್ಯ ಸಾಮಗ್ರಿಗಳನ್ನು ತಂದು ಇರಿಸಲಾಗಿತ್ತು. ಮರುದಿನ (ಜುಲೈ 28) ಬೆಳಿಗ್ಗೆ ಸಂಸ್ಥೆಯ ಸೂಪರ್‌ವೈಸರ್ ಸಬಿರುಲ್ ಅವರು ಕೆಲಸಕ್ಕೆ ಆಗಮಿಸಿ ನೋಡಿದಾಗ, ಅಲ್ಲಿ ಇರಿಸಲಾಗಿದ್ದ ₹2,53,075 ಮೌಲ್ಯದ ಬೆಲೆಬಾಳುವ ವಿದ್ಯುತ್ ಪ್ರಸರಣ ಉಪಕರಣಗಳು ಕಳವಾಗಿರುವುದು ಗೊತ್ತಾಗಿದೆ.
ರಾತ್ರಿ ವೇಳೆ ಕಾವಲಿಲ್ಲದ ಸಮಯದಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ ಎಂದು ಶಂಕಿಸಲಾಗಿದೆ. ಸೈಟ್ ಮ್ಯಾನೇಜರ್ ನೀಡಿದ ದೂರಿನ ಆಧಾರದಲ್ಲಿ ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.
