ಕೊಚ್ಚಿ: ಅಫ್ಘಾನಿಸ್ತಾನದಲ್ಲಿ ಪ್ರವಾಸದಲ್ಲಿದ್ದುಕೊಂಡು ಸೋಷಿಯಲ್ ಮೀಡಿಯಾಗಳಿಗೆ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದ ಕೇರಳ ಮೂಲದ ಜನಪ್ರಿಯ ಮಹಿಳಾ ಟ್ರಾವೆಲ್ ವ್ಲಾಗರ್ ಒಬ್ಬರು, ತಾವು ಅಫ್ಘಾನಿಸ್ತಾನದ ಬಾಮಿಯಾನ್‌ನಲ್ಲಿ ಮುಜಾಹಿದ್ದೀನ್‌ಗಳಿಂದ ಬಂಧನಕ್ಕೊಳಗಾಗಿದ್ದು ಸಂಕಷ್ಟದಲ್ಲಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆರವಿಗಾಗಿ ಮನವಿ ಮಾಡಿದ್ದಾರೆ.
'ಬ್ಯಾಕ್‌ಪ್ಯಾಕರ್ ಅರುಣಿಮಾ' (Backpacker Arunima) ಹೆಸರಿನ ಫೇಸ್‌ಬುಕ್ ಪುಟದಲ್ಲಿ ಈ ಆಘಾತಕಾರಿ ಪೋಸ್ಟ್ ಪ್ರಕಟವಾಗಿದ್ದು, ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸಹಾಯ ಮಾಡುವಂತೆ ಅವರು ಕೋರಿದ್ದಾರೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ ಏನಿದೆ?:
ಸ್ಥಳೀಯ ಅಧಿಕಾರಿಗಳಿಂದ ಬಂದಿದೆ ಎನ್ನಲಾದ ಅಧಿಕೃತ ಸಂವಹನದ ಭಾಷಾಂತರವನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿರುವ ಅರುಣಿಮಾ:
- "ನಾನು ಅಫ್ಘಾನಿಸ್ತಾನದಲ್ಲಿ ಮುಜಾಹಿದ್ದೀನ್‌ಗಳಿಂದ ಬಂಧನಕ್ಕೊಳಗಾಗಿದ್ದು, ತೀವ್ರ ಸಂಕಷ್ಟದಲ್ಲಿದ್ದೇನೆ" ಎಂದು ತಿಳಿಸಿದ್ದಾರೆ.
- ಆದರೆ, ತಮ್ಮನ್ನು ಯಾವ ಕಾರಣಕ್ಕಾಗಿ ಮತ್ತು ಯಾವಾಗ ಬಂಧಿಸಲಾಗಿದೆ ಅಥವಾ ಪ್ರಸ್ತುತ ಯಾರು ತಮ್ಮನ್ನು ವಶದಲ್ಲಿಟ್ಟುಕೊಂಡಿದ್ದಾರೆ ಎಂಬ ಕುರಿತು ಆ ಪೋಸ್ಟ್‌ನಲ್ಲಿ ಹೆಚ್ಚಿನ ವಿವರಗಳನ್ನು ನೀಡಿಲ್ಲ.
ನೆರವಿಗಾಗಿ ವಿದೇಶಾಂಗ ಸಚಿವಾಲಯಕ್ಕೆ ಮನವಿ:
ಅರುಣಿಮಾ ಅವರು ಅಫ್ಘಾನಿಸ್ತಾನದಲ್ಲಿ ಪ್ರವಾಸ ಮಾಡುತ್ತಾ ನಿರಂತರವಾಗಿ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಇದೀಗ ಅವರು ಸಂಕಷ್ಟಕ್ಕೆ ಸಿಲುಕಿರುವ ಸುದ್ದಿ ಹೊರಬೀಳುತ್ತಿದ್ದಂತೆ, ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಮೂಲಕ ಪ್ರದೀಪ್‌ಕುಮಾರ್ ಎಂಬುವವರು ವಿದೇಶಾಂಗ ಸಚಿವಾಲಯ (@MEAIndia), ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ಕೇರಳ ಮುಖ್ಯಮಂತ್ರಿ ಕಚೇರಿಯನ್ನು (CMOKeralam) ಟ್ಯಾಗ್ ಮಾಡಿ, ತುರ್ತಾಗಿ ನೆರವು ನೀಡಿ ಆಕೆಯನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ.