ಗುರುಗ್ರಾಮ: ದೆಹಲಿಯಿಂದ ಗುರುಗ್ರಾಮಕ್ಕೆ ಭೇಟಿ ನೀಡಿದ್ದ ಯುವಕನೊಬ್ಬ ಜನದಟ್ಟಣೆಯನ್ನು ಕಂಡು ತೀವ್ರ ಆತಂಕಕ್ಕೆ ಒಳಗಾಗಿ (Panic Attack) ರಸ್ತೆಯಲ್ಲೇ ಕುಳಿತು ಸ್ನೇಹಿತೆಯನ್ನು ತಬ್ಬಿಕೊಂಡ ಘಟನೆ ಸಿವಿಲ್ ಲೈನ್ಸ್‌ನ ಫ್ರೆಂಡ್ಸ್ ಕಾಲೋನಿ ವ್ಯಾಪ್ತಿಯಲ್ಲಿ ನಡೆದಿದೆ. ಸ್ನೇಹಿತೆ ಸಮಯಪ್ರಜ್ಞೆ ಮೆರೆದು ಆತನನ್ನು ಸಮಾಧಾನಪಡಿಸುವ ಮೂಲಕ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ನೋಡಿಕೊಂಡಿದ್ದಾರೆ.
ಮನಸ್ಸಿನ ನೆಮ್ಮದಿಗೆಂದು ಬಂದಿದ್ದ ಯುವಕ:
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಯುವಕ ಮಾನಸಿಕ ತೊಳಲಾಟ ಮತ್ತು ಒತ್ತಡದಿಂದ ಬಳಲುತ್ತಿದ್ದ. ಆತನಿಗೆ ದೈನಂದಿನ ವಾತಾವರಣದಿಂದ ಬದಲಾವಣೆ ಸಿಗಲಿ ಹಾಗೂ ಮನಸ್ಸು ಹಗುರವಾಗಲಿ ಎಂಬ ಉದ್ದೇಶದಿಂದ ಆತನ ಸ್ನೇಹಿತೆ ದೆಹಲಿಯಿಂದ ಗುರುಗ್ರಾಮಕ್ಕೆ ಕರೆದುಕೊಂಡು ಬಂದಿದ್ದರು. ಆದರೆ, ಫ್ರೆಂಡ್ಸ್ ಕಾಲೋನಿ ಪ್ರದೇಶದಲ್ಲಿ ಅತಿಯಾದ ಜನಸಂದಣಿ ಮತ್ತು ಗದ್ದಲವನ್ನು ಕಂಡ ತಕ್ಷಣ ಯುವಕ ತೀವ್ರ ಗಾಬರಿ ಹಾಗೂ ಆತಂಕಕ್ಕೆ ಒಳಗಾಗಿದ್ದಾನೆ.
ರಸ್ತೆಯಲ್ಲೇ ಕುಳಿತು ಸ್ನೇಹಿತೆಯನ್ನು ತಬ್ಬಿಕೊಂಡ:
ಆತಂಕದ ತೀವ್ರತೆಗೆ ದಿಕ್ಕುತೋಚದಂತಾದ ಯುವಕ ರಸ್ತೆಯ ನೆಲದ ಮೇಲೆಯೇ ಕುಳಿತು, ಜತೆಯಲ್ಲಿದ್ದ ಸ್ನೇಹಿತೆಯನ್ನು ಬಲವಾಗಿ ಅಪ್ಪಿಕೊಂಡು ಬಿಡಲೊಲ್ಲದೆ ಕುಳಿತಿದ್ದಾನೆ. ಇದನ್ನು ನೋಡಲು ಸ್ಥಳದಲ್ಲಿ ಜನರು ಜಮಾಯಿಸಲು ಆರಂಭಿಸಿದಾಗ ಆತ ಮತ್ತಷ್ಟು ಗಾಬರಿಗೊಂಡಿದ್ದಾನೆ.
ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳದ ಯುವತಿ, ಆತನನ್ನು ನಿರಂತರವಾಗಿ ಸಂತೈಸುತ್ತಾ, ಸುತ್ತಲಿನ ಗದ್ದಲ ಕಡಿಮೆ ಮಾಡಲು ಯತ್ನಿಸಿದ್ದಾರೆ. ಅಲ್ಲದೆ, ಸ್ಥಳದಲ್ಲಿದ್ದ ಜನರು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡುವುದನ್ನು ತಡೆಯಲು ಯತ್ನಿಸಿ, ಪರಿಸ್ಥಿತಿ ಶಾಂತವಾಗುವವರೆಗೆ ಆತನ ಪಕ್ಕದಲ್ಲೇ ಕುಳಿತು ಧೈರ್ಯ ತುಂಬಿದ್ದಾರೆ.
ವೈರಲ್ ಆದ ವಿಡಿಯೋ:
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಾರ್ವಜನಿಕರು ವಿಡಿಯೋ ಮಾಡುವ ಬದಲು ಇಂತಹ ಸಂದರ್ಭಗಳಲ್ಲಿ ಸಂವೇದನಾಶೀಲತೆ ತೋರಬೇಕು ಎಂಬ ಚರ್ಚೆ ಶುರುವಾಗಿದೆ. ಯುವತಿಯ ಸಮಯೋಚಿತ ಕಾಳಜಿ ಮತ್ತು ತಾಳ್ಮೆಯಿಂದಾಗಿ ಯಾವುದೇ ಅಹಿತಕರ ಘಟನೆ ನಡೆಯದೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
