ಬಂಟ್ವಾಳ: ಸಹೋದರನ ಮನೆಯಲ್ಲಿ ನಡೆಯುತ್ತಿದ್ದ ದೈವಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಅಸ್ವಸ್ಥಗೊಂಡು ಅಂಗಳದಲ್ಲೇ ಕುಸಿದು ಬಿದ್ದ ಯುವತಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಡಗಬೆಳ್ಳೂರು ಗ್ರಾಮದಲ್ಲಿ ಸಂಭವಿಸಿದೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಪ್ರಕಟಣೆ ತಿಳಿಸಿದೆ.
ಮೃತರನ್ನು ಬಡಗಬೆಳ್ಳೂರು ಗ್ರಾಮದ ಗುಂಡಾಲ ಮನೆ ನಿವಾಸಿ ಶಶಿಕುಮಾರ್ ಎಂಬವರ ತಂಗಿ ಶೋಭಾ ಜಿ.ಎನ್ (31) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಗುಂಡಾಲ ನಿವಾಸಿ ಶಶಿಕುಮಾರ್ (35) ಅವರ ಮನೆಯಲ್ಲಿ ಆಗಸ್ಟ್ 16ರಂದು ದೈವಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ಅವರ ತಂಗಿ ಶೋಭಾ ಅವರು ಸಹೋದರನ ಮನೆಗೆ ಬಂದಿದ್ದರು. ಸಂಜೆ 6:00 ಗಂಟೆಯ ಸುಮಾರಿಗೆ ಮನೆಯಲ್ಲಿ ದೈವಗಳ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ, ಶೋಭಾ ಅವರಿಗೆ ದಿಢೀರ್ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. "ಉಸಿರಾಡಲು ಕಷ್ಟವಾಗುತ್ತಿದೆ" ಎಂದು ಹೇಳುತ್ತಲೇ ಅವರು ಮನೆಯ ಅಂಗಳದಲ್ಲೇ ಕುಸಿದು ಬಿದ್ದಿದ್ದಾರೆ.
ಕೂಡಲೇ ಅವರನ್ನು ಸ್ಥಳೀಯವಾಗಿ ಉಪಚರಿಸಿ, ಆಂಬುಲೆನ್ಸ್ ಮೂಲಕ ಬಿ.ಸಿ. ರೋಡಿನಲ್ಲಿರುವ ಸೋಮಯಾಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಪರೀಕ್ಷಿಸಿ ದೃಢಪಡಿಸಿದ್ದಾರೆ.
ಮೃತ ಶೋಭಾ ಅವರಿಗೆ ಈ ಹಿಂದೆಯೂ ಆಗಾಗ ಎದೆನೋವು ಬರುತ್ತಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದ ಅಥವಾ ಇನ್ನಾವುದೋ ಅನಾರೋಗ್ಯದ ಕಾರಣದಿಂದ ಬಳಲಿ ಆಗಸ್ಟ್ 16ರಂದು ರಾತ್ರಿ 8:45 ಗಂಟೆಯ ಸುಮಾರಿಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಮೃತರ ಸಹೋದರ ಶಶಿಕುಮಾರ್ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 41/2026 ಕಲಂ: 194 BNSS 2023 ರಂತೆ ಪ್ರಕರಣ ದಾಖಲಾಗಿದೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಪ್ರಕಟಣೆ ತಿಳಿಸಿದೆ.
