ಕಾನ್ಪುರ/ಉನ್ನಾವೋ:
ಉತ್ತರ ಪ್ರದೇಶದ ಕಾನ್ಪುರ-ಪ್ರಯಾಗ್‌ರಾಜ್ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ 24 ವರ್ಷದ ರಾಷ್ಟ್ರಮಟ್ಟದ ಬಾಕ್ಸಿಂಗ್ ಆಟಗಾರ್ತಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಮೃತ ಯುವತಿಯನ್ನು ಉನ್ನಾವೋ ಜಿಲ್ಲೆಯ ನಿವಾಸಿ ಮನ್ತ್ಸಾ (24) ಎಂದು ಗುರುತಿಸಲಾಗಿದ್ದು, ಆಕೆಯ ಸ್ನೇಹಿತನೇ ಈ ಕೃತ್ಯ ಎಸಗಿದ್ದಾನೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಶಾಪಿಂಗ್‌ಗೆಂದು ತೆರಳಿ ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿ:
ಕುಟುಂಬಸ್ಥರು ನೀಡಿದ ಮಾಹಿತಿಯ ಪ್ರಕಾರ, ನವೆಂಬರ್ 5 ರಂದು ಮಧ್ಯಾಹ್ನ ಸುಮಾರು 12:30 ಕ್ಕೆ ಮನ್ತ್ಸಾ ಮನೆಯಿಂದ ಹೊರಟಿದ್ದಳು. ತನ್ನ ಸೊಸೆಯ ವಿವಾಹಕ್ಕೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲು 'ಲಾಲ್ ಬಂಗಾಲಾ' ಮಾರುಕಟ್ಟೆಗೆ ಹೋಗುವುದಾಗಿ ಹೇಳಿದ್ದಳು. ಆದರೆ ಸಂಜೆಯಾದರೂ ಆಕೆ ಮನೆಗೆ ಮರಳಿರಲಿಲ್ಲ. ಆತಂಕಗೊಂಡ ಮನೆಯವರು ಮೊಬೈಲ್‌ಗೆ ಕರೆ ಮಾಡಿದಾಗ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ತಕ್ಷಣವೇ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಔಟ್‌ಪೋಸ್ಟ್ ಹಾಗೂ ಗಂಗಾಘಾಟ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ (Missing Complaint) ದಾಖಲಿಸಿದ್ದರು.
ಮನೆಯಿಂದ 50 ಕಿ.ಮೀ ದೂರದಲ್ಲಿ ಪತ್ತೆಯಾಯ್ತು ಮೃತದೇಹ:
ಮನೆಯಿಂದ ಬರೋಬ್ಬರಿ 40 ರಿಂದ 50 ಕಿಲೋಮೀಟರ್ ದೂರದಲ್ಲಿರುವ ಮಹಾರಾಜ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಾನ್ಪುರ-ಪ್ರಯಾಗ್‌ರಾಜ್ ಹೆದ್ದಾರಿಯ ಬದಿಯಲ್ಲಿ ಅಪರಿಚಿತ ಯುವತಿಯ ಮೃತದೇಹ ಪತ್ತೆಯಾಗಿತ್ತು. ಪೊಲೀಸರು ಪರಿಶೀಲನೆ ನಡೆಸಿದಾಗ ಅದು ನಾಪತ್ತೆಯಾಗಿದ್ದ ಬಾಕ್ಸರ್ ಮನ್ತ್ಸಾ ಅವರ ಮೃತದೇಹ ಎಂಬುದು ದೃಢಪಟ್ಟಿದೆ.
ಮೃತಳ ತಾಯಿ ಸಂಜನಾ ನೀಡಿರುವ ಹೇಳಿಕೆಯ ಪ್ರಕಾರ, ಮನ್ತ್ಸಾ ಧರಿಸಿದ್ದ ಜಾಕೆಟ್, ಸ್ಕಾರ್ಫ್ ಹಾಗೂ ಆಕೆಯ ಮೊಬೈಲ್ ಫೋನ್ ನಾಪತ್ತೆಯಾಗಿದೆ.
ಗೋಲ್ಡ್ ಮೆಡಲಿಸ್ಟ್ ಆಗಿದ್ದ ಪ್ರತಿಭಾವಂತೆ – ಸ್ನೇಹಿತನ ಮೇಲೆ ಅನುಮಾನ:
"ಮನ್ತ್ಸಾ ರಾಷ್ಟ್ರಮಟ್ಟದ ಪ್ರತಿಭಾವಂತ ಬಾಕ್ಸರ್ ಆಗಿದ್ದು, ಚಿನ್ನದ ಪದಕವನ್ನು (Gold Medalist) ಗೆದ್ದು ಕ್ರೀಡಾಕ್ಷೇತ್ರದಲ್ಲಿ ಉನ್ನತ ಕನಸುಗಳನ್ನು ಹೊತ್ತಿದ್ದಳು. ಮನೆಯ ಕಿರಿಯ ಮಗಳಾಗಿದ್ದ ಆಕೆಯ ಈ ಸಾವು ನಮ್ಮ ಕುಟುಂಬವನ್ನೇ ಛಿದ್ರಗೊಳಿಸಿದೆ. ಆಕೆಯ ಸ್ನೇಹಿತನೇ ಈ ಹತ್ಯೆಯ ಹಿಂದೆ ಶಾಮೀಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಆಕೆಯ ತಾಯಿ ಕಣ್ಣೀರಿಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ತನಿಖೆ ಚುರುಕು:
ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪೊಲೀಸರು ಪ್ರಕರಣವನ್ನು ನಾನಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಮೃತ ಯುವತಿಯ ಕಾಲ್ ಡಿಟೈಲ್ ರೆಕಾರ್ಡ್ಸ್ (CDR) ಪರಿಶೀಲನೆ ನಡೆಸಲಾಗುತ್ತಿದ್ದು, ಕೊನೆಯದಾಗಿ ಆಕೆ ಯಾರೊಂದಿಗೆ ಸಂಪರ್ಕದಲ್ಲಿದ್ದಳು ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ. ಕುಟುಂಬಸ್ಥರು ಸ್ನೇಹಿತನ ಮೇಲೆ ಮಾಡಿರುವ ಕೊಲೆ ಆರೋಪದ ಕುರಿತೂ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.
