ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಎನ್‌ಐಟಿಕೆ ಮುಖ್ಯದ್ವಾರದ ಎದುರಿನ ಪಾಳುಬಿದ್ದ ಬಸ್ ನಿಲ್ದಾಣಕ್ಕೆ ಕಾಯಕಲ್ಪ: ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ ‘ಮೀಡಿಯಾ ಮನಸುಗಳು’ ತಂಡ!


ಸುರತ್ಕಲ್/ಮಂಗಳೂರು: ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸುರತ್ಕಲ್‌ನ ಎನ್‌ಐಟಿಕೆ (NITK) ಮುಖ್ಯದ್ವಾರದ ಮುಂಭಾಗದಲ್ಲೇ ಕಸ-ಕಡ್ಡಿ ತುಂಬಿ ಅನಾಥ ಸ್ಥಿತಿಯಲ್ಲಿದ್ದ ಬಸ್ ನಿಲ್ದಾಣವನ್ನು ‘ಮೀಡಿಯಾ ಮನಸುಗಳು’ ಪತ್ರಕರ್ತರ ತಂಡವು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ ಸಾರ್ವಜನಿಕ ಬಳಕೆಗೆ ಸಜ್ಜುಗೊಳಿಸಿದೆ.

ತನ್ನ 13ನೇ ಸಮಾಜಮುಖಿ ಸೇವಾ ಚಟುವಟಿಕೆಯ ಅಂಗವಾಗಿ ನವೆಂಬರ್ 4ರ ಮುಂಜಾನೆಯೇ ಕಾರ್ಯಪ್ರವೃತ್ತರಾದ ಮಾಧ್ಯಮ ಮಿತ್ರರು, ಸಂಪೂರ್ಣ ಪಾಳುಬಿದ್ದಿದ್ದ ಬಸ್ ತಂಗುದಾಣವನ್ನು ತಾವೇ ನಿಂತು ಸ್ವಚ್ಛಗೊಳಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.



15 ದಿನಗಳ ಹಿಂದೆಯೇ ಸ್ವಚ್ಛವಾಗಿದ್ದ ಪಕ್ಕದ ನಿಲ್ದಾಣ – ಇದರತ್ತ ಇರಲಿಲ್ಲ ಅಧಿಕಾರಿಗಳ ಗಮನ:

ಸುಮಾರು 15 ದಿನಗಳ ಹಿಂದೆಯಷ್ಟೇ ಎನ್‌ಐಟಿಕೆ ಶಿಕ್ಷಣ ಸಂಸ್ಥೆಯ ಸಮೀಪದ ಇನ್ನೊಂದು ಬಸ್ ನಿಲ್ದಾಣವನ್ನು ‘ಮೀಡಿಯಾ ಮನಸುಗಳು’ ತಂಡ ಸ್ವಚ್ಛಗೊಳಿಸಿತ್ತು. ಆದರೆ ಅದರ ಕೂಗಳತೆಯ ದೂರದಲ್ಲೇ ಇದ್ದ ಮತ್ತೊಂದು ಬಸ್ ನಿಲ್ದಾಣದ ದುಃಸ್ಥಿತಿಯ ಬಗ್ಗೆ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಯಾವುದೇ ಗಮನ ಹರಿಸಿರಲಿಲ್ಲ.

ಪ್ರತಿದಿನ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ ಕಾಯುವ ಈ ನಿಲ್ದಾಣದಲ್ಲಿ ಗಿಡಗಂಟಿಗಳು ಬೆಳೆದು, ಧೂಳು ಮತ್ತು ಕಸದ ರಾಶಿ ಬಿದ್ದಿತ್ತು. ಜನರು ಒಳಗೆ ಕಾಲಿಡಲೂ ಹಿಂಜರಿಯುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯ ಆಟೋ ಚಾಲಕರೊಬ್ಬರು ಈ ಅವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ತಂಡದ ಗಮನಕ್ಕೆ ತಂದ ತಕ್ಷಣವೇ ಸ್ಪಂದಿಸಿದ ಪತ್ರಕರ್ತರು, ಸ್ಥಳಕ್ಕೆ ಧಾವಿಸಿ ನಿಲ್ದಾಣಕ್ಕೆ ನವಕಳೆ ತಂದಿದ್ದಾರೆ.



ಜಾಹೀರಾತು ಆದಾಯ ಯಾರ ಜೇಬಿಗೆ? ನಿರ್ವಹಣೆಗೆ ಲೋಕಾಯುಕ್ತ ತನಿಖೆಗೆ ಸಾರ್ವಜನಿಕರ ಆಗ್ರಹ:

ಸಾರ್ವಜನಿಕ ತಂಗುದಾಣಗಳ ಇಂತಹ ಶೋಚನೀಯ ಸ್ಥಿತಿಯು ವ್ಯವಸ್ಥೆಯ ಬೇಜವಾಬ್ದಾರಿಯನ್ನು ಎತ್ತಿ ತೋರಿಸಿದೆ. ಸಾಮಾನ್ಯವಾಗಿ ಬಸ್ ನಿಲ್ದಾಣಗಳಲ್ಲಿ ಖಾಸಗಿ ಪ್ರಾಯೋಜಕತ್ವದಡಿ ಬೃಹತ್ ಜಾಹೀರಾತು ಫಲಕಗಳನ್ನು ಅಳವಡಿಸಲಾಗುತ್ತದೆ. ಆದರೆ, ಆ ಜಾಹೀರಾತುಗಳಿಂದ ಬರುವ ಆದಾಯ ಯಾರ ಪಾಲಾಗುತ್ತಿದೆ? ನಿರ್ವಹಣೆಯ ನೇರ ಜವಾಬ್ದಾರಿ ಜಾಹೀರಾತು ಏಜೆನ್ಸಿಯದ್ದೋ ಅಥವಾ ಮಹಾನಗರ ಪಾಲಿಕೆಯದ್ದೋ ಎಂಬುದು ಸ್ಪಷ್ಟವಾಗಿಲ್ಲ.

ನಿರ್ವಹಣೆಯ ಹೆಸರಿನಲ್ಲಿ ಬಿಡುಗಡೆಯಾಗುವ ಅನುದಾನ ಎಲ್ಲಿಗೆ ಹೋಗುತ್ತಿದೆ ಎಂಬ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ. ಈ ಜಾಹೀರಾತು ಒಪ್ಪಂದಗಳು, ಹಣಕಾಸು ವಹಿವಾಟು ಹಾಗೂ ನಿರ್ವಹಣೆಯ ವೈಫಲ್ಯದ ಬಗ್ಗೆ ಲೋಕಾಯುಕ್ತರು ಸಮಗ್ರ ದಾಖಲೆಗಳನ್ನು ಪರಿಶೀಲಿಸಿ ತನಿಖೆ ನಡೆಸಬೇಕೆಂದು ಸ್ಥಳೀಯ ಸಾರ್ವಜನಿಕರು ಆಗ್ರಹಿಸಿದ್ದಾರೆ.



ಶ್ರಮದಾನದಲ್ಲಿ ಪಾಲ್ಗೊಂಡ ಪ್ರಮುಖರು:

ಈ ಸ್ವಚ್ಛತಾ ಕಾರ್ಯಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರಾದ ಶ್ವೇತಾ ಪೂಜಾರಿ ಸಹಕಾರ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹಾಗೂ ‘ಮೀಡಿಯಾ ಮನಸುಗಳು’ ತಂಡದ ಪ್ರಮುಖರಾದ ಶಶಿ ಬೆಳ್ಳಾಯರು, ಗಿರೀಶ್ ಮಣೇಲ್, ಶಿವು ಕುಲಾಲ್, ರಜನ್ ಕುಮಾರ್ ಕಾವೂರು, ರಾಕೇಶ್ ಎಕ್ಕಾರ್ ಹಾಗೂ ಗಣೇಶ್ ದೇವಾಡಿಗ ಪಂಜ ಖುದ್ದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಶ್ರಮದಾನ ಮಾಡಿದರು.