ನವದೆಹಲಿ:
ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರಿಗೆ (Security Guard) ಅವರ ಪತ್ನಿ ಮನೆಯಿಂದಲೇ ಬಿಸಿ ಊಟ ತಂದುಕೊಟ್ಟು, ಇಬ್ಬರೂ ಒಟ್ಟಾಗಿ ಕುಳಿತು ಊಟ ಸವಿದಿರುವ ಅತ್ಯಂತ ಸರಳ ಹಾಗೂ ಅಪಾರ ಪ್ರೀತಿಯ ಕ್ಷಣವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ.
ಜ್ಞಾನದ್ ಭಟ್ ಎಂಬ 'ಎಕ್ಸ್' (ಟ್ವಿಟರ್) ಬಳಕೆದಾರರು ಈ ಸುಂದರ ದೃಶ್ಯವನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಮುಚ್ಚಿದ ಶಟರ್ ಎದುರು ಪ್ರೀತಿಯ ಊಟ:
ಎಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಯೊಂದರ ಮುಂಭಾಗದಲ್ಲಿ ಈ ದೃಶ್ಯ ಸೆರೆಯಾಗಿದೆ. ರಾತ್ರಿ ವೇಳೆ ಬ್ಯಾಂಕ್ ಬಾಗಿಲು ಮುಚ್ಚಿದ ಬಳಿಕ, ಹೊರಗಿನ ಜಗುಲಿಯ ಮೇಲೆ ಇರಿಸಲಾಗಿದ್ದ ಸಣ್ಣ ಮೇಜಿನ ಬಳಿ ತಿಳಿ ನೀಲಿ ಬಣ್ಣದ ಸಮವಸ್ತ್ರ ಧರಿಸಿದ್ದ ಸೆಕ್ಯುರಿಟಿ ಗಾರ್ಡ್ ಪತಿಯೊಂದಿಗೆ ಪತ್ನಿ ಕುಳಿತಿದ್ದರು.
ಯಾರ ಗದ್ದಲವೂ ಇಲ್ಲದ ಶಾಂತ ರಾತ್ರಿಯಲ್ಲಿ, ಪತ್ನಿ ತಂದಿದ್ದ ಬಿಸಿಬಿಸಿ ಮನೆಯೂಟವನ್ನು ಇಬ್ಬರೂ ಹಂಚಿಕೊಂಡು, ನಗುನಗುತ್ತಾ ಪರಸ್ಪರ ಮಾತನಾಡುತ್ತಾ ಊಟ ಸವಿಯುವ ಸರಳ ದೃಶ್ಯ ವಿಡಿಯೋದಲ್ಲಿದೆ. ಬಿಡುವಿಲ್ಲದ ಉದ್ಯೋಗ ಹಾಗೂ ಬದುಕಿನ ಜಂಜಾಟಗಳ ನಡುವೆಯೂ ದಂಪತಿ ಪರಸ್ಪರ ಕಂಡುಕೊಂಡ ಈ ಅಪರೂಪದ ಪ್ರೀತಿಯ ಕ್ಷಣಕ್ಕೆ ಕ್ಯಾಮೆರಾ ಕಣ್ಣು ಸಾಕ್ಷಿಯಾಗಿದೆ.
"ಕಷ್ಟದ ಕಾಲದಲ್ಲೂ ಜೊತೆಯಿರುವುದೇ ನಿಜವಾದ ಪ್ರೀತಿ":
ವಿಡಿಯೋದ ಮೇಲೆ "In your highs, maybe. In your lows, always" (ನಿಮ್ಮ ಸುಖದ ದಿನಗಳಲ್ಲಿ ಜೊತೆಗಿರುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಕಷ್ಟದ ದಿನಗಳಲ್ಲಿ ಸದಾ ಜೊತೆಯಿರುತ್ತಾರೆ) ಎಂಬ ಸಾಲುಗಳನ್ನು ಬರೆಯಲಾಗಿದೆ.
ಈ ವಿಡಿಯೋವನ್ನು ಹಂಚಿಕೊಂಡ ಜ್ಞಾನದ್ ಭಟ್, "ಹಣ, ಅಂತಸ್ತು, ವೃತ್ತಿಜೀವನಕ್ಕೆ ಅತಿಯಾದ ಪ್ರಾಮುಖ್ಯತೆ ನೀಡುವ ಇಂದಿನ ಕಾಲಘಟ್ಟದಲ್ಲಿ, ಸಮಾಜದ ದೃಷ್ಟಿಯಲ್ಲಿ ಈ ವ್ಯಕ್ತಿಯ ಬಳಿ ಭೌತಿಕ ಸಂಪತ್ತು ಕಡಿಮೆಯಿರಬಹುದು. ಆದರೆ ಬದುಕಿನಲ್ಲಿ ನಿಜವಾಗಿಯೂ ಮಹತ್ವದ್ದಾಗಿರುವ ಅಪ್ಪಟ ಪ್ರೀತಿಯನ್ನು ಈತ ಹೊಂದಿದ್ದಾನೆ. ಇಂತಹ ಬಂಧಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ" ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ನೆಟ್ಟಿಗರ ಮೆಚ್ಚುಗೆ:
ವಿಡಿಯೋ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು ಕಮೆಂಟ್ ಬಾಕ್ಸ್‌ನಲ್ಲಿ ಪ್ರೀತಿಯ ಸಂದೇಶಗಳನ್ನು ಹರಿಸಿದ್ದಾರೆ. ಪ್ರೀತಿಪಾತ್ರರಿಗೆ ಅಡುಗೆ ಮಾಡುವುದು, ಕಾಳಜಿ ವಹಿಸುವುದು ಹಾಗೂ ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಲ್ಲುವುದು ಕೇವಲ ದೈನಂದಿನ ಜವಾಬ್ದಾರಿಯಲ್ಲ, ಅದು ಸಂಬಂಧವನ್ನು ಗಟ್ಟಿಗೊಳಿಸುವ ನಿಜವಾದ ಕಾಳಜಿ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
