ಮಂಗಳೂರು:
ನಗರದ ಮೆರ್ಕಾರಾ ಹಿಲ್‌ನಲ್ಲಿರುವ ಐತಿಹಾಸಿಕ ಹಿನ್ನೆಲೆಯ ಪುನರ್ ಅಭಿವೃದ್ಧಿಗೊಂಡ ಸಿಎಸ್‌ಐ ಸುಶಾಂತಿ ನಿಲಯ ಸಮುದಾಯ ಭವನದ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 25ರಂದು ಸಂಜೆ 5 ಗಂಟೆಗೆ ನೆರವೇರಲಿದೆ ಎಂದು ಸಿಎಸ್‌ಐ ಸುಶಾಂತಿ ದೇವಾಲಯದ ಸಭಾಪಾಲಕ ರೆ. ಸಂತೋಷ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರದೇಶದ ಐತಿಹಾಸಿಕ ಕಟ್ಟಡವೊಂದರ ಸಂರಕ್ಷಣೆ ಮತ್ತು ಪುನರುಜ್ಜಿವನದ ದೃಷ್ಟಿಯಿಂದ ಈ ಸಮುದಾಯ ಭವನ ಪ್ರಮುಖ ಮೈಲಿಗಲ್ಲಾಗಿದೆ ಎಂದರು.
ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಎಸ್‌ಐ ಕರ್ನಾಟಕ ದಕ್ಷಿಣ ಡಯಾಸಿಸ್‌ನ ಬಿಷಪ್ ರೆ. ಹೇಮಚಂದ್ರ ಕುಮಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿ ರೆ. ಡಾ. ಡೆಕ್ಸ್ಟರ್ ಮಾಬೆನ್ ಹಾಗೂ ಚರ್ಚ್ ಸಭಾಪಾಲಕ ರೆ. ಸಂತೋಷ್ ಕುಮಾರ್ ಸಿಂಗ್ ಭವನವನ್ನು ಉದ್ಘಾಟಿಸಲಿದ್ದಾರೆ. ಗೌರವ ಅತಿಥಿಗಳಾಗಿ ಸಂತೋಷ್ ಕುಮಾರ್ ಜೋನಸ್, ಕಿರಣ್ ಕರಾಟ್ ಹಾಗೂ ದೇವಪುತ್ರ ಕೋಟ್ಯಾನ್ ಭಾಗವಹಿಸಲಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದ ಪದಾಧಿಕಾರಿಗಳು, ಡಯಾಸಿಸ್ ಖಜಾಂಚಿ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿರಲಿದ್ದಾರೆ.
ಪೋಷಕರ ಸ್ಮರಣಾರ್ಥ ಜೋನಸ್ ದಂಪತಿಯ ಕೊಡುಗೆ:
ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಸುಸಜ್ಜಿತ ಸಮುದಾಯ ಭವನವನ್ನು ಜೋನಸ್ ಪೆಟ್ರೊ ಪ್ರೊಡಕ್ಟ್ಸ್ ಪ್ರೈ.ಲಿ. ಸಂಸ್ಥೆಯ ನಿರ್ದೇಶಕ ಸುನಿಲ್ ಜೋನಸ್ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಸಂಧ್ಯಾ ಜೋನಸ್ ದಂಪತಿ ತಮ್ಮ ಅಗಲಿದ ತಂದೆ-ತಾಯಿಗಳಾದ ಎಸ್. ಎಲಿಯ ಜೋನಸ್ ಮತ್ತು ವಿ. ಸುಲೋಚನಾ ಜೋನಸ್ ಅವರ ಸ್ಮರಣಾರ್ಥ ಸಂಪೂರ್ಣವಾಗಿ ಪುನರ್ ನಿರ್ಮಿಸಿಕೊಟ್ಟಿದ್ದಾರೆ.
300 ಆಸನಗಳ ಹವಾನಿಯಂತ್ರಿತ ಭವನ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉದ್ಯಮಿ ಸುನಿಲ್ ಜೋನಸ್, "ಸುಮಾರು ಏಳು ತಿಂಗಳುಗಳ ಕಾಲ ಈ ಅಭಿವೃದ್ಧಿ ಕಾಮಗಾರಿ ನಡೆದಿದೆ. ಸಂಪೂರ್ಣವಾಗಿ ನವೀಕರಣಗೊಂಡಿರುವ ಈ ಕಟ್ಟಡದಲ್ಲಿ 300 ಆಸನ ಸಾಮರ್ಥ್ಯದ ಅತ್ಯಾಧುನಿಕ ಹವಾನಿಯಂತ್ರಿತ (AC) ಸಮುದಾಯ ಭವನವನ್ನು ಸಾರ್ವಜನಿಕ ಸೇವೆಗೆ ಸಜ್ಜುಗೊಳಿಸಲಾಗಿದೆ" ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಧ್ಯಾ ಜೋನಸ್, ಬೆನೆಟ್ ಅಮನ್ನ ಹಾಗೂ ಸಂತೋಷ್ ಕುಮಾರ್ ಜೋನಸ್ ಉಪಸ್ಥಿತರಿದ್ದರು.
