ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಕರಾವಳಿ ಪ್ರವಾಸೋದ್ಯಮ ನೀತಿಗೆ ಹರ್ಷ: ಮೂಲಸೌಕರ್ಯ ಸ್ಥಾನಮಾನ, ಬೋಟ್ ಕಾರಿಡಾರ್‌ನಿಂದ ಆರ್ಥಿಕ ಕ್ರಾಂತಿ – ತಜ್ಞೆ ಪ್ರತಿಮಾ ಮನೋಹರ್ ವಿಶ್ಲೇಷಣೆ!


ಮಂಗಳೂರು / ಉಡುಪಿ: ಮಂಗಳೂರಿನಲ್ಲಿ ನಡೆದ ಐತಿಹಾಸಿಕ ಕರಾವಳಿ ಕರ್ನಾಟಕದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಕ್ಷೇತ್ರಕ್ಕೆ ಸರ್ಕಾರ ನೀಡಿರುವ ಮಹತ್ವದ ಘೋಷಣೆಗಳನ್ನು ಅರ್ಬನ್ ವಿಷನ್ ಅಧ್ಯಕ್ಷರು ಹಾಗೂ ಉಡುಪಿ ಪ್ಯಾರಡೈಸ್ ರೆಸಾರ್ಟ್ಸ್‌ನ ನಿರ್ದೇಶಕಿ ಪ್ರತಿಮಾ ಮನೋಹರ್ ಸ್ವಾಗತಿಸಿದ್ದಾರೆ.

ಕರಾವಳಿ ಭಾಗಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಆದ್ಯತೆ ಮತ್ತು ಗಮನ ದೊರೆತಿರುವುದು ಅತ್ಯಂತ ಸಂತಸದ ವಿಚಾರ ಎಂದಿರುವ ಅವರು, ಸರ್ಕಾರದ ನೀತಿ-ನಿಯಮಗಳು ಖಾಸಗಿ ಹೂಡಿಕೆಗೆ ನೀಡಬಹುದಾದ ಬಲ ಹಾಗೂ ಭವಿಷ್ಯದ ಸಾಧ್ಯತೆಗಳ ಕುರಿತು ಸಮಗ್ರ ಪ್ರತಿಕ್ರಿಯೆ ನೀಡಿದ್ದಾರೆ.

 ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ: ಕ್ರಾಂತಿಕಾರಿ ಹೆಜ್ಜೆ

  • 9 ಪ್ರವಾಸೋದ್ಯಮ ಸರ್ಕ್ಯೂಟ್‌ಗಳು: ಪ್ರವಾಸೋದ್ಯಮವನ್ನು ಕೇವಲ ಪ್ರತ್ಯೇಕ ಯೋಜನೆಗಳನ್ನಾಗಿ ನೋಡದೆ, ಒಟ್ಟಾರೆ ಸಮಗ್ರ ಪರಿಸರ ವ್ಯವಸ್ಥೆಯಾಗಿ (Ecosystem) ರೂಪಿಸಲು 9 ಸರ್ಕ್ಯೂಟ್‌ಗಳ ಪರಿಕಲ್ಪನೆ ಭದ್ರ ಬುನಾದಿ ಹಾಕಲಿದೆ.
  • ಮೂಲಸೌಕರ್ಯ ಸ್ಥಾನಮಾನ (Infrastructure Status): ಪ್ರವಾಸೋದ್ಯಮ ಯೋಜನೆಗಳಿಗೆ ‘ಮೂಲಸೌಕರ್ಯ ಸ್ಥಾನಮಾನ’ ನೀಡಿರುವುದು ಇಡೀ ಹೂಡಿಕೆಯ ಸಮೀಕರಣವನ್ನೇ ಆಮೂಲಾಗ್ರವಾಗಿ ಬದಲಾಯಿಸಲಿದೆ. ಇದರಿಂದ ದೀರ್ಘಾವಧಿಯ ಬಂಡವಾಳ ಲಭ್ಯತೆ ಸುಲಭವಾಗಲಿದ್ದು, ಪ್ರವಾಸೋದ್ಯಮವು ಕೇವಲ ‘ಆತಿಥ್ಯ’ಕ್ಕೆ ಸೀಮಿತವಾಗದೆ ಬೃಹತ್ ‘ಆರ್ಥಿಕ ಮೂಲಸೌಕರ್ಯ’ವಾಗಿ ಹೊರಹೊಮ್ಮಲಿದೆ.

. ಸಿಆರ್‌ಝಡ್ (CRZ) ನಿಯಮ ಸಡಿಲಿಕೆ: ಸ್ಪಷ್ಟತೆಯ ನಿರೀಕ್ಷೆ

ಕರಾವಳಿಯಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಕವಾಗಿಸಲು ಸ್ಪಷ್ಟ ಹಾಗೂ ನಿಖರವಾದ ನಿಯಂತ್ರಣ ವ್ಯವಸ್ಥೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಸಿಆರ್‌ಝಡ್ (CRZ) ಮಾನದಂಡಗಳಲ್ಲಿ ತರಲು ಉದ್ದೇಶಿಸಿರುವ ಪ್ರವಾಸೋದ್ಯಮ ಸ್ನೇಹಿ ಬದಲಾವಣೆಗಳು ಅತ್ಯಂತ ಮಹತ್ವದ ಪಾತ್ರ ವಹಿಸಲಿದ್ದು, ಸರ್ಕಾರದ ಅಧಿಕೃತ ಅಧಿಸೂಚನೆಯ ಸೂಕ್ಷ್ಮ ಅಂಶಗಳನ್ನು (Fine Print) ಕಾದುನೋಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

. 343 ಕಿ.ಮೀ ಕರಾವಳಿ ದೋಣಿ ವ್ಯವಸ್ಥೆ: ಬಹುಮುಖಿ ಆರ್ಥಿಕ ಕಾರಿಡಾರ್

ಸಾರ್ವಜನಿಕ ಹೂಡಿಕೆಯು ಖಾಸಗಿ ಬಂಡವಾಳವನ್ನು ಆಕರ್ಷಿಸುವ ಗುಣಕವಾಗಬೇಕು (Multiplier). ಇದಕ್ಕೆ ೧೨ ಪ್ರಮುಖ ಕೇಂದ್ರಗಳನ್ನು ಸಂಪರ್ಕಿಸುವ 343 ಕಿ.ಮೀ ಉದ್ದದ ಕರಾವಳಿ ದೋಣಿ (Boat Network) ಯೋಜನೆಯೇ ಅತ್ಯುತ್ತಮ ಉದಾಹರಣೆ. ಇದು ಕೇವಲ ಒಂದು ಜಲ ಸಾರಿಗೆ ಮಾರ್ಗವಾಗಿರದೆ, ಕಾರಿಡಾರ್‌ನದ್ದಕ್ಕೂ ನೂರಾರು ಕೆಫೆಗಳು, ಆತಿಥ್ಯ ಕೇಂದ್ರಗಳು, ಸ್ಥಳೀಯ ಪ್ರವಾಸೋದ್ಯಮ ಅನುಭವಗಳು ಹಾಗೂ ಸಣ್ಣ ಉದ್ಯಮಗಳನ್ನು ಸೃಷ್ಟಿಸಿ ಸ್ಥಳೀಯ ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡಲಿದೆ.

"ಸರ್ಕಾರವು ಬಲವಾದ ಮೂಲಸೌಕರ್ಯವನ್ನು ನಿರ್ಮಿಸಿ, ನಿಯಮಗಳಲ್ಲಿ ಸ್ಪಷ್ಟತೆ-ಖಚಿತತೆಯನ್ನು ಮೂಡಿಸಿದರೆ ಸಾಕು; ಉದ್ಯಮಿಗಳು ಅದರ ಸುತ್ತಲೂ ಅತ್ಯಂತ ಸಮೃದ್ಧವಾದ ಆರ್ಥಿಕತೆಯನ್ನು ಕಟ್ಟಿ ಬೆಳೆಸಬಲ್ಲರು."ಪ್ರತಿಮಾ ಮನೋಹರ್, ಅಧ್ಯಕ್ಷರು, ಅರ್ಬನ್ ವಿಷನ್ ಮತ್ತು ನಿರ್ದೇಶಕಿ, ಪ್ಯಾರಡೈಸ್ ರೆಸಾರ್ಟ್ಸ್, ಉಡುಪಿ.