ಮಂಗಳೂರು: ಅವಿಕಾ ಪ್ರೊಡಕ್ಷನ್ ಮತ್ತು ಬಿ.ಆರ್.ಬಿ. ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಟ ಅರ್ಜುನ್ ದೇವ್ ನಿರ್ದೇಶಿಸಿ ಅಭಿನಯಿಸಿರುವ ಬಹುನಿರೀಕ್ಷಿತ 'ಟಾಸ್' ತುಳು ಚಲನಚಿತ್ರವು ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.
ಮಂಗಳೂರಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ-ನಿರ್ದೇಶಕ ಅರ್ಜುನ್ ದೇವ್, ಚಿತ್ರಕ್ಕೆ ತೆಲಿಕೆದ ಬೊಳ್ಳಿ ಡಾ| ದೇವದಾಸ್ ಕಾಪಿಕಾಡ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ರಚಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರಕೃತಿ ರಮಣೀಯ ತಾಣಗಳಲ್ಲಿ ಎರಡು ಹಂತಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು. ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕುಂದಾಪುರ, ಕಾರ್ಕಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಚಿತ್ರ ತೆರೆಕಾಣಲಿದೆ.
ಕಲಾವಿದನ ನೈಜ ಬದುಕಿನ ಚಿತ್ರಣ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖ್ಯಾತ ನಟ ಡಾ| ದೇವದಾಸ್ ಕಾಪಿಕಾಡ್, ಚಿತ್ರತಂಡದ ನಿರಂತರ ಶ್ರಮ ಹಾಗೂ ಎಲ್ಲ ಕಲಾವಿದರು, ತಂತ್ರಜ್ಞರ ಒಗ್ಗಟ್ಟಿನ ಕೆಲಸದಿಂದ ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದರು. ನಟ ನವೀನ್ ಡಿ. ಪಡೀಲ್ ಮಾತನಾಡಿ, "ಈ ಚಿತ್ರದಲ್ಲಿನ ಪಾತ್ರ ನನ್ನ ನೈಜ ಜೀವನಕ್ಕೆ ಬಹಳ ಹತ್ತಿರವಾಗಿದೆ. ಒಬ್ಬ ಕಲಾವಿದನ ಬದುಕು, ಪ್ರೀತಿ ಹಾಗೂ ಭಾವನಾತ್ಮಕ ಸನ್ನಿವೇಶಗಳು ಚಿತ್ರದಲ್ಲಿದ್ದು, ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎರಡು ಭಾಷೆ, ಪ್ರತ್ಯೇಕ ಚಿತ್ರೀಕರಣ: 'ಟಾಸ್' ಚಿತ್ರವನ್ನು ತುಳು ಹಾಗೂ ಕನ್ನಡ ಭಾಷೆಗಳಲ್ಲಿ ಪ್ರತ್ಯೇಕವಾಗಿ ಚಿತ್ರೀಕರಿಸಲಾಗಿದೆ. ಈ ಸಿನೆಮಾಗಳಿಗೆ ಸ್ಯಾಂಡಲ್‌ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಗಣೇಶ್ ಸಾಥ್ ನೀಡಿದ್ದಾರೆ. ಇದೊಂದು ಪರಿಪೂರ್ಣ ಕೌಟುಂಬಿಕ ಚಿತ್ರವಾಗಿದ್ದು, ಕಾಮಿಡಿ ಜೊತೆಗೆ ಸೆಂಟಿಮೆಂಟ್, ಆ್ಯಕ್ಷನ್ ಹಾಗೂ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ಚಿತ್ರದ ಹಾಡುಗಳು ಈಗಾಗಲೇ ಕೇಳುಗರ ಮನಗೆದ್ದಿವೆ ಎಂದು ಅರ್ಜುನ್ ದೇವ್ ಮಾಹಿತಿ ನೀಡಿದರು.
ತಾರಾಗಣ ಮತ್ತು ತಾಂತ್ರಿಕ ಬಳಗ: ಚಿತ್ರದಲ್ಲಿ ಡಾ| ದೇವದಾಸ್ ಕಾಪಿಕಾಡ್, ಅರ್ಜುನ್ ದೇವ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳೂರು, ಶೋಭರಾಜ್ ಪಾವೂರು, ಸುತೇಜ್ ಶೆಟ್ಟಿ, ಸಂಗೀತಾ ಶೆಟ್ಟಿ, ಚೈತ್ರಾ ಶೆಟ್ಟಿ, ಕೃತಿ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ‘ಪಿ ಆ್ಯಂಡ್ ವೈ ವರ್ಲ್ಡ್ ಟೂರ್ಸ್ ಎಲ್ ಎಲ್‌ಪಿ’ಯ ಸಾಗರ್ ಪೂಜಾರಿ ನಿರ್ಮಾಪಕರಾಗಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದು, ಜೋಯೆಲ್ ಶಮನ್ ಡಿ'ಸೋಜಾ ಛಾಯಾಗ್ರಹಣ, ಯಶ್ವಿನ್ ಕೆ. ಶೆಟ್ಟಿಗಾರ್ ಸಂಕಲನ, ರಾಜೇಶ್ ಕೊಳಕೆ ಮತ್ತು ರಾಜೇಶ್ ಬಾಂದ್ಯೋಡ್ ಕಲಾ ನಿರ್ದೇಶನ ಮಾಡಿದ್ದಾರೆ. ಸಂದೀಪ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಸಚಿನ್ ಎ. ಎಸ್. ಉಪ್ಪಿನಂಗಡಿ ವಿತರಣೆಯ ಜವಾಬ್ದಾರಿ ಹೊತ್ತಿದ್ದಾರೆ. ಸಹ ನಿರ್ದೇಶಕರಾಗಿ ಯಶಾಂತ್ ಕಲ್ಲಡ್ಕ, ರಾಕೇಶ್ ಬಿ. ಜೆ., ವಿಕ್ರಮ್ ದೇವಾಡಿಗ ಹಾಗೂ ಸಹಾಯಕ ನಿರ್ದೇಶಕರಾಗಿ ಸೌರವ್ ರಾಮ್, ಸುಜಿತ್ ವಿನೋದ್, ಆಶಿಷ್ ರಾವ್ ಕಾರ್ಯನಿರ್ವಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಟಿ ಸುತೇಜ್ ಶೆಟ್ಟಿ, ಭೋಜರಾಜ ವಾಮಂಜೂರು, ಶರ್ಮಿಳಾ ರೋಷನ್, ಚೈತ್ರಾ ಶೆಟ್ಟಿ, ಜೋಯೆಲ್, ಆದಿತ್ಯರಾಜ್, ಯಶ್ವಿನ್, ಪ್ರಕಾಶ್ ಶೆಟ್ಟಿ, ಸಂದೀಪ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.