ತಿರುವನಂತಪುರಂ: ಬೇರೆಯವರು ತನ್ನ ಮಗುವನ್ನು ಮುದ್ದಿಸುವುದು ಇಷ್ಟವಾಗದ ಕಾರಣಕ್ಕೆ ತಾಯಿಯೊಬ್ಬಳು ತನ್ನ ಒಂದು ವರ್ಷದ ಹೆಣ್ಣು ಮಗುವಿನ ಕುತ್ತಿಗೆಯನ್ನು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಕೇರಳದ ತಿರುವನಂತಪುರಂನ ವಿಳವೂರ್‌ಕಲ್ ಪಂಚಾಯಿತಿ ವ್ಯಾಪ್ತಿಯ ಮೂಲಮನ್‌ನಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ಕ್ರಿಸ್ಟಿ ಎಂಬಾಕೆಯನ್ನು ಮಲಯಿನ್‌ಕೀಳು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಠಡಿಯೊಳಗೆ ಲಾಕ್ ಮಾಡಿ ಕೃತ್ಯ:
ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿ ಕ್ರಿಸ್ಟಿ ತನ್ನ ಒಂದು ವರ್ಷದ ಮಗುವನ್ನು ಕೊಠಡಿಯೊಳಗೆ ಕರೆದೊಯ್ದು ಬಾಗಿಲು ಹಾಕಿಕೊಂಡಿದ್ದಳು. ಅಲ್ಲಿ ಹರಿತವಾದ ಆಯುಧದಿಂದ ಮಗುವಿನ ಕತ್ತು ಸೀಳಿ ಕೊಂದಿದ್ದಾಳೆ. ಸಂಬಂಧಿಕರೊಬ್ಬರು ಮಗುವನ್ನು ನೋಡಲು ಮನೆಗೆ ಬಂದಾಗ ಈ ಭೀಕರ ಕೃತ್ಯ ಬೆಳಕಿಗೆ ಬಂದಿದೆ. ಕ್ರಿಸ್ಟಿ ಬಾಗಿಲು ತೆರೆದು ತಾನೇ ಮಗುವನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾಳೆ. ಗಾಬರಿಗೊಂಡ ಸಂಬಂಧಿಕರು ಕೊಠಡಿಯೊಳಗೆ ಪರಿಶೀಲಿಸಿದಾಗ ಮಗುವಿನ ಕುತ್ತಿಗೆಯಲ್ಲಿ ಆಳವಾದ ಗಾಯವಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ.
ಸ್ಥಳೀಯರು ತಕ್ಷಣವೇ ಮಗುವನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ, ಬಳಿಕ ತಿರುವನಂತಪುರಂನ ಎಸ್‌ಎಟಿ (SAT) ಆಸ್ಪತ್ರೆಗೆ ದಾಖಲಿಸಿದರಾದರೂ, ತೀವ್ರ ರಕ್ತಸ್ರಾವದಿಂದ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.
'ಬೇರೆಯವರು ಮುದ್ದಿಸುವುದು ಇಷ್ಟವಿರಲಿಲ್ಲ':
ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ನೀಡಿರುವ ಹೇಳಿಕೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ತನ್ನ ಮಗುವನ್ನು ಇತರರು ಮುದ್ದಿಸುವುದು ಹಾಗೂ ಮುಟ್ಟುವುದನ್ನು ತನಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ, ಆ ಕಾರಣಕ್ಕಾಗಿಯೇ ಕೊಂದಿರುವುದಾಗಿ ಕ್ರಿಸ್ಟಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ.
ಆರೋಪಿ ಮಹಿಳೆ ತೀವ್ರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಶಂಕೆ ವ್ಯಕ್ತವಾಗಿದ್ದು, ಆಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಲಯಿನ್‌ಕೀಳು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
