ಝಾನ್ಸಿ: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ, ಪ್ರೀತಿಸಿ ಮದುವೆಯಾಗಿದ್ದ ಯುವತಿಯೊಬ್ಬಳು ಕೇವಲ ಒಂದೂವರೆ ವರ್ಷದಲ್ಲಿ ನಿಗೂಢವಾಗಿ ಕೊಲೆಯಾಗಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯ ಸಿಪ್ರಿ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಘಟನೆಯ ಬೆನ್ನಲ್ಲೇ ಆಕೆಯ ಪತಿ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಮಧ್ಯಪ್ರದೇಶದ ದತಿಯಾ ಜಿಲ್ಲೆಯ ಇಂದರ್‌ಗಢ ಮೂಲದ ಶಿವಾನಿ ಅಲಿಯಾಸ್ ಸುಧಾ (27) ಕೊಲೆಯಾದ ದುರ್ದೈವಿ.
ಮಂಚದ ಕೆಳಗೆ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆ:
ಕಳೆದ ಮೂರು ತಿಂಗಳಿಂದ ಶಿವಾನಿ ತನ್ನ ಸಹೋದರಿ ಮುಸ್ಕಾನ್ ಮತ್ತು ಸಹೋದರ ಅನಿಕೇತ್ ಜೊತೆ ಝಾನ್ಸಿಯ ಆವಾಸ್ ವಿಕಾಸ್ ಕಾಲೋನಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸೋಮವಾರ ಮುಂಜಾನೆ ಮನೆಯ ಮಂಚದ ಕೆಳಗೆ ಶಿವಾನಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಆಕೆಯನ್ನು ಝಾನ್ಸಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ವೈದ್ಯಕೀಯ ತಪಾಸಣೆ ವೇಳೆ ಆಕೆಯ ಕುತ್ತಿಗೆ ಹಿಸುಕಿ (Strangulation) ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಹಾಗೂ ಮುಖದ ಐದು ಕಡೆ ಗಾಯಗಳ ಗುರುತುಗಳಿರುವುದು ದೃಢಪಟ್ಟಿದೆ.
ಪತಿಯಿಂದಲೇ ಕೃತ್ಯ ಶಂಕೆ:
ಗ್ವಾಲಿಯರ್ ಮೂಲದ ಯಶ್ ಠಾಕೂರ್ ಎಂಬಾತನನ್ನು ಶಿವಾನಿ ಸುಮಾರು 18 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಮದುವೆಯಾದಾಗಿನಿಂದಲೂ ಸಣ್ಣಪುಟ್ಟ ವಿಚಾರಗಳಿಗೂ ಆಕೆಯ ಮೇಲೆ ಪತಿ ಹಲ್ಲೆ ನಡೆಸುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆಗಸ್ಟ್ 31ರಂದು ದಂಪತಿ ನಡುವೆ ತೀವ್ರ ಜಗಳ ನಡೆದಿದ್ದು, ಈ ವೇಳೆ ಯಶ್ ಶಿವಾನಿ ಮೇಲೆ ಹಲ್ಲೆ ನಡೆಸಿ, ಕೊಲೆಗೈದು ಕೋಣೆಗೆ ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತಳ ಸಹೋದರಿ ಪಕ್ಕದ ಕೋಣೆಯಲ್ಲೇ ಮಲಗಿದ್ದರೂ ಗಲಾಟೆಯ ಸದ್ದು ಆಕೆಗೆ ಕೇಳಿಸದಿರುವ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕುಟುಂಬ ಸಮೇತ ಎಸ್ಕೇಪ್:
ಘಟನೆ ಬಳಿಕ ಆರೋಪಿ ಯಶ್, ಪತ್ನಿಯ ಮೊಬೈಲ್ ಫೋನ್ ಅನ್ನೂ ಕಸಿದುಕೊಂಡು ಪರಾರಿಯಾಗಿದ್ದು, ಇಬ್ಬರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಆರೋಪಿಗಾಗಿ ಗ್ವಾಲಿಯರ್‌ಗೆ ತೆರಳಿದ್ದ ಪೊಲೀಸರಿಗೆ ಆತನ ಮನೆಯೂ ಬೀಗ ಹಾಕಿರುವುದು ಕಂಡುಬಂದಿದ್ದು, ಆತನ ಕುಟುಂಬಸ್ಥರೂ ತಲೆಮರೆಸಿಕೊಂಡಿದ್ದಾರೆ. ಗಾರ್ಮೆಂಟ್ಸ್ ಶಾಪ್‌ನಲ್ಲಿ ಸೇಲ್ಸ್‌ಮ್ಯಾನ್ ಆಗಿರುವ ಯಶ್ ಈ ಹಿಂದೆಯೂ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಆತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಸಿಟಿ ಎಸ್ಪಿ ಪ್ರೀತಿ ಸಿಂಗ್ ಹಾಗೂ ಸಿಟಿ ಸಿಒ ರಾಮ್‌ವೀರ್ ಸಿಂಗ್ ಅವರ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಕಾಲ್ ಡಿಟೇಲ್ಸ್ (CDR) ಪರಿಶೀಲಿಸಿ ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ.
