ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಇನ್‌ಸ್ಟಾಗ್ರಾಮ್ ನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಯುವತಿ ಮತ್ತು ಅತ್ತೆಯನ್ನು ಕತ್ತಿಯಿಂದ ಕೊಚ್ಚಿ ಕೊಂದ ವಿದ್ಯಾರ್ಥಿ!

 





ತಮಿಳುನಾಡಿನ ತಿರುಪ್ಪೂರ್ನಲ್ಲಿ ಭೀಕರ ಅವಳಿ ಕೊಲೆ; ಎಂಸಿಎ ವಿದ್ಯಾರ್ಥಿಯನ್ನು ಬಂಧಿಸಿದ ಪೊಲೀಸರು!

ತಿರುಪ್ಪೂರ್ (ತಮಿಳುನಾಡು):

 

ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿ ಪ್ರೀತಿಸಿ ಮದುವೆಯಾಗಿದ್ದ ಯುವತಿ ಹಾಗೂ ಆಕೆಯ ತಾಯಿಯನ್ನು ಯುವಕನೊಬ್ಬ ಭೀಕರವಾಗಿ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಪಲ್ಲಡಂ ಸಮೀಪದ ಪಚಪಾಳಯಂನಲ್ಲಿ ಮಂಗಳವಾರ ಸಂಭವಿಸಿದೆ.

 

ಘಟನೆಗೆ ಸಂಬಂಧಿಸಿದಂತೆ ದಿಂಡಿಗಲ್ ಮೂಲದ, ಕೊಯಮತ್ತೂರಿನ ಖಾಸಗಿ ಕಾಲೇಜಿನ ಎಂಸಿಎ (MCA) ವಿದ್ಯಾರ್ಥಿ ಎಂ. ಅಕ್ಷಯನ್ (22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

 

ಕೊಲೆಯಾದ ದುರ್ದೈವಿಗಳನ್ನು ಪೂವರಸಿ (21) ಹಾಗೂ ಆಕೆಯ ತಾಯಿ ಧನಲಕ್ಷ್ಮಿ (50) ಎಂದು ಗುರುತಿಸಲಾಗಿದೆ. ಪೂವರಸಿ ಇತ್ತೀಚೆಗೆ ಪದವಿ ಮುಗಿಸಿ ಸ್ಥಳೀಯ ಎಲೆಕ್ಟ್ರಿಕ್ ಬೈಕ್ ಶೋರೂಮ್ಒಂದರಲ್ಲಿ ಕೆಲಸ ಮಾಡುತ್ತಿದ್ದರು.



ಇನ್ಸ್ಟಾಗ್ರಾಮ್ನಲ್ಲಿ ಶುರುವಾಗಿದ್ದ 5 ವರ್ಷಗಳ ಲವ್ ಸ್ಟೋರಿ!

ಪೊಲೀಸರ ಮೂಲಗಳ ಪ್ರಕಾರ, ಅಕ್ಷಯನ್ ಹಾಗೂ ಪೂವರಸಿ 5 ವರ್ಷಗಳ ಹಿಂದೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯಗೊಂಡು ಪ್ರೀತಿಸಲು ಆರಂಭಿಸಿದ್ದರು. ಮೂರು ತಿಂಗಳ ಹಿಂದೆ ಪೋಷಕರಿಗೆ ತಿಳಿಸದೇ ಇಬ್ಬರೂ ರಹಸ್ಯವಾಗಿ ಮದುವೆಯಾಗಿದ್ದರು. ಮದುವೆಯ ನಂತರವೂ ಪೂವರಸಿ ತಮ್ಮ ಹೆತ್ತವರ ಮನೆಯಲ್ಲೇ ವಾಸಿಸುತ್ತಿದ್ದರೆ, ಅಕ್ಷಯನ್ ಕೊಯಮತ್ತೂರಿನ ಕಾಲೇಜು ಹಾಸ್ಟೆಲ್ನಲ್ಲಿ ತಂಗಿ ವ್ಯಾಸಂಗ ಮಾಡುತ್ತಿದ್ದ.

 

ಆದರೆ, ಕಳೆದ ಕೆಲವು ದಿನಗಳಿಂದ ಪೂವರಸಿ ತನ್ನನ್ನು ಕಡೆಗಣಿಸುತ್ತಿದ್ದಾಳೆ ಹಾಗೂ ಮಾತುಕತೆ ಬಂದ್ ಮಾಡಿದ್ದಾಳೆ ಎಂಬ ಕೋಪ ಅಕ್ಷಯನ್ನಲ್ಲಿಸಿತ್ತು.



ಮನೆಗೆ ನುಗ್ಗಿ ಕತ್ತಿಯಿಂದ ಹಲ್ಲೆ:

ಮಂಗಳವಾರ ಬೆಳಿಗ್ಗೆ ಪೂವರಸಿ ಅವರ ತಂದೆ ಪಳನಿಸ್ವಾಮಿ ಕೆಲಸಕ್ಕೆ ತೆರಳಿದ ತಕ್ಷಣವೇ ಅಕ್ಷಯನ್ ಪಚಪಾಳಯಂನಲ್ಲಿರುವ ಅವರ ಮನೆಗೆ ಬಂದಿದ್ದಾನೆ. ಪೂವರಸಿಯನ್ನು ತನ್ನೊಂದಿಗೆ ಬರುವಂತೆ ಒತ್ತಾಯಿಸಿದ್ದಾನೆ. ಆದರೆ ಪೂವರಸಿ ಹಾಗೂ ಆಕೆಯ ತಾಯಿ ಧನಲಕ್ಷ್ಮಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

 

ಇದರಿಂದ ತೀವ್ರ ಕೆರಳಿದ ಅಕ್ಷಯನ್, ತನ್ನ ಬಳಿಯಿದ್ದ ಕತ್ತಿಯಿಂದ (Sickle) ಇಬ್ಬರ ಮೇಲೆಯೂ ದಂಡಂ ದಶಗುಣಂ ಎಂಬಂತೆ ಸತತವಾಗಿ ಬೀಸಿದ್ದಾನೆ. ಚೀರಾಟದ ಸದ್ದು ಕೇಳಿ ಧಾವಿಸಿ ಬಂದ ನೆರೆಹೊರೆಯವರು ಮನೆಯ ಬಾಗಿಲು ಮುರಿದು ಅಕ್ಷಯನ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.



ಆಸ್ಪತ್ರೆಗೆ ಒಯ್ಯುವಾಗ ಮಾರ್ಗಮಧ್ಯೆ ಸಾವು:

ತೀವ್ರ ರಕ್ತಸ್ರಾವದಿಂದ ಧನಲಕ್ಷ್ಮಿ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಗಂಭೀರವಾಗಿ ಗಾಯಗೊಂಡಿದ್ದ ಪೂವರಸಿಯನ್ನು ಪಲ್ಲಡಂ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.

 

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸೃಷ್ಟಿ ಸಿಂಗ್ ಮಾತನಾಡಿ, "ಆರೋಪಿ ಅಕ್ಷಯನ್ ತನಗೆ ಮದುವೆಯಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾನೆ, ಆದರೆ ಅದಕ್ಕೆ ಯಾವುದೇ ದಾಖಲೆಗಳಿಲ್ಲ. ಇತ್ತೀಚೆಗೆ ಪೂವರಸಿ ಆತನನ್ನು ಭೇಟಿಯಾಗುವುದನ್ನು ನಿಲ್ಲಿಸಿದ್ದಳು. ಕೊಲೆಯಲ್ಲಿ ಯಾವುದೇ ಜಾತಿಯ ಕೋನವಿಲ್ಲ, ವಿಚಾರಣೆ ಮುಂದುವರಿದಿದೆ" ಎಂದು ತಿಳಿಸಿದ್ದಾರೆ. ಪಲ್ಲಡಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.