ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಮಂಗಳೂರಿನ ಕಾಲೇಜಿನಲ್ಲಿ ಭೀಕರ ರ‍್ಯಾಗಿಂಗ್ ವಿಕೃತಿ: ಜೂನಿಯರ್ ವಿದ್ಯಾರ್ಥಿಗಳ ಕಿಡ್ನ್ಯಾಪ್ ಮಾಡಿ ಬಟ್ಟೆ ಬಿಚ್ಚಿಸಿ ಹಲ್ಲೆ; 9 ಸೀನಿಯರ್ಸ್‌ ವಿರುದ್ಧ ಕೊಲೆಯತ್ನ ಕೇಸ್! Horrific Ragging Incident in Mangaluru: Juniors Kidnapped, Stripped, and Brutally Assaulted with Belt and Iron Knuckles; Attempt to Murder Case Filed Against 9 Seniors




ಮಂಗಳೂರು:

ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳಿಗೆ ಸೀನಿಯರ್ಸ್ ನಡೆಸಿದ ಅಮಾನುಷ ರ‍್ಯಾಗಿಂಗ್ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರಸ್ತೆಯಿಂದಲೇ ಜೂನಿಯರ್ ವಿದ್ಯಾರ್ಥಿಗಳನ್ನು ಬೈಕ್‌ನಲ್ಲಿ ಹೊತ್ತೊಯ್ದು, ಮನೆಯೊಂದರಲ್ಲಿ ಕೂಡಿಹಾಕಿ ಬೆಲ್ಟ್, ಹ್ಯಾಂಗರ್ ಹಾಗೂ ಕಬ್ಬಿಣದ ಪಂಚ್‌ನಿಂದ ಹಲ್ಲೆ ನಡೆಸಿದ ಆರೋಪದಡಿ 9 ಮಂದಿ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ಕೊಲೆಯತ್ನ ಹಾಗೂ ರ‍್ಯಾಗಿಂಗ್ ನಿಷೇಧ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ.

ಕೇರಳದ ತ್ರಿಶೂರ್ ನಿವಾಸಿಯಾಗಿರುವ, ಪ್ರಥಮ ವರ್ಷದ ಬಿಬಿಎ (ಪೋರ್ಟ್ ಆ್ಯಂಡ್ ಶಿಪ್ಪಿಂಗ್ ಲಾಜಿಸ್ಟಿಕ್ಸ್) ವಿದ್ಯಾರ್ಥಿ ಅಮೀರ್ ಅಲಿ (19) ಹಾಗೂ ಅವರ ಸಹಪಾಠಿ ಮಹಮ್ಮದ್ ಅಲ್ಪಾಜ್ (19) ಹಲ್ಲೆಗೊಳಗಾದ ಸಂತ್ರಸ್ತ ಯುವಕರು.

ಕಾಲೇಜಿನಿಂದ ತೆರಳುತ್ತಿದ್ದವರನ್ನು ಅಡ್ಡಗಟ್ಟಿ ಅಪಹರಣ:

ಆಗಸ್ಟ್ 19ರಂದು ಅಪರಾಹ್ನ ಸುಮಾರು 3:19ರ ವೇಳೆಗೆ ಅಮೀರ್ ಅಲಿ ಹಾಗೂ ಮಹಮ್ಮದ್ ಅಲ್ಪಾಜ್ ಕಾಲೇಜು ಮುಗಿಸಿ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದಾಗ, ಸೀನಿಯರ್ ವಿದ್ಯಾರ್ಥಿಗಳ ಗುಂಪೊಂದು ಇವರನ್ನು ಸುತ್ತುವರಿದಿದೆ. ನಾಸೀದ್ ಅಮೀರ್ ಎಂಬಾತ ಬೈಕ್ ತಂದು ನಿಲ್ಲಿಸಿದ್ದು, ಉಳಿದ ಆರೋಪಿಗಳಾದ ಆದಿಲ್ ಎಂ., ಅರ್ಶಕ್, ಅನೀಶ್, ಉವೈಸ್ ಮತ್ತು ರೋಹನ್ ರಮೇಶ್ ಇಬ್ಬರೂ ಜೂನಿಯರ್ ವಿದ್ಯಾರ್ಥಿಗಳನ್ನು ಬಲವಂತವಾಗಿ ಬೈಕಿನಲ್ಲಿ ಕುಳ್ಳಿರಿಸಿದ್ದಾರೆ. ಇದನ್ನು ವಿರೋಧಿಸಿದಾಗ ಹಲ್ಲೆ ನಡೆಸಿ, ಬಲವಂತವಾಗಿ ನಿರ್ಜನ ಸ್ಥಳದಲ್ಲಿದ್ದ ಮನೆಯೊಂದರ ಕೋಣೆಗೆ ಕರೆದೊಯ್ದು ಕೂಡಿಹಾಕಿದ್ದಾರೆ.

ಬಟ್ಟೆ ಬಿಚ್ಚಿಸಿ ಅಮಾನುಷ ಥಳಿತ, ಕಬ್ಬಿಣದ ಪಂಚ್‌ನಿಂದ ಕೊಲೆಯತ್ನ!

ಕೊಠಡಿಯಲ್ಲಿ ಮೊದಲೇ ಹಾಜರಿದ್ದ ರೆಹಾನ್ ಎಂ.ಪಿ. ಹಾಗೂ ಶಿನಾಸ್ ಸೇರಿದಂತೆ ಇತರರು ಸಂತ್ರಸ್ತರ ಬಟ್ಟೆಗಳನ್ನು ಬಿಚ್ಚಿಸಿ ಒಳಉಡುಪಿನಲ್ಲಿ ನಿಲ್ಲಿಸಿದ್ದಾರೆ. ಕೂಗಾಡದಂತೆ ಬಾಯಿಗೆ ಬಟ್ಟೆ ತುರುಕಿ, ನಾಸೀದ್ ಅಮೀರ್ ಬೆಲ್ಟ್‌ನಿಂದ ಹಾಗೂ ಆದಿಲ್ ಎಂ. ಹ್ಯಾಂಗರ್‌ನಿಂದ ಮೈಮೇಲೆ ಬಾಸುಂಡೆ ಬರುವಂತೆ ಥಳಿಸಿದ್ದಾರೆ.

ಈ ಮಧ್ಯೆ, ರೆಹಾನ್ ಎಂ.ಪಿ. ಎಂಬಾತ ಕೊಲ್ಲುವ ಉದ್ದೇಶದಿಂದಲೇ ಅಮೀರ್ ಅಲಿ ಕುತ್ತಿಗೆ ಹಾಗೂ ತಲೆಗೆ ಗುರಿಯಿಟ್ಟು 'ಕಬ್ಬಿಣದ ಪಂಚ್'ನಿಂದ (Iron Punch) ಜೋರಾಗಿ ಬೀಸಿದ್ದಾನೆ. ಅಮೀರ್ ತಕ್ಷಣ ಬಗ್ಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದು, ಪಂಚ್ ತಲೆಯ ಹಿಂಭಾಗಕ್ಕೆ ಗಾಯಗೊಳಿಸಿದೆ. ಬಳಿಕ ಮಹಮ್ಮದ್ ಅಲ್ಪಾಜ್ ಮೇಲೆ ಅದೇ ಪಂಚ್‌ನಿಂದ ಎರಗಿದಾಗ, ಹೊಡೆತ ಆತನ ಎಡಭುಜ ಹಾಗೂ ಹಣೆಗೆ ತಗುಲಿ ರಕ್ತಗಾಯಗಳಾಗಿವೆ. ಈ ಇಡೀ ಹಿಂಸೆಯನ್ನು ಅರ್ಶಕ್ ಎಂಬಾತ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ.

ಕಲುಷಿತ ನೀರು ಚೆಲ್ಲಿ ಚಾಕುವಿನಿಂದ ತುಂಡರಿಸುವ ಬೆದರಿಕೆ:

ಹಲ್ಲೆಯಿಂದ ನಲುಗಿ ನೀರು ಕೇಳಿದಾಗ ಆರೋಪಿ ರೋಹನ್ ರಮೇಶ್ ಕೊಳಕು ನೀರನ್ನು ನೀಡಿದ್ದು, ಕುಡಿಯಲು ನಿರಾಕರಿಸಿದಾಗ ಮೈಮೇಲೆ ಚೆಲ್ಲಿದ್ದಾರೆ. "ಈ ವಿಷಯವನ್ನು ಪೊಲೀಸರಿಗಾಗಲಿ ಅಥವಾ ಕಾಲೇಜಿಗಾಗಲಿ ತಿಳಿಸಿದರೆ ಕ್ಯಾಂಪಸ್‌ನಲ್ಲೇ ಚಾಕುವಿನಿಂದ ಕೊಚ್ಚಿ ತುಂಡು ತುಂಡು ಮಾಡುತ್ತೇವೆ" ಎಂದು ಉವೈಸ್ ಜೀವಬೆದರಿಕೆ ಒಡ್ಡಿದ್ದಾನೆ. ಸಂಜೆ 6 ಗಂಟೆಯವರೆಗೆ ಅಕ್ರಮವಾಗಿ ಕೂಡಿಹಾಕಿ ನರಕಯಾತನೆ ನೀಡಲಾಗಿದೆ.

ಮರುದಿನ ತರಗತಿಗೆ ತೆರಳಿದಾಗಲೂ "ಕ್ಲೀನ್ ಶೇವ್ ಮಾಡಿಕೊಂಡು ಬರಬೇಕು, ಕಾಲಿಗೆ ಶೂ ಧರಿಸಬಾರದು" ಎಂದು ನಾಸೀದ್ ಅಮೀರ್ ಮತ್ತೆ ಎಚ್ಚರಿಕೆ ನೀಡಿದ್ದಾನೆ. ಇದರಿಂದ ತೀವ್ರ ಆತಂಕಕ್ಕೊಳಗಾದ ವಿದ್ಯಾರ್ಥಿಗಳು ಊರಿಗೆ ಮರಳಿ ಪೋಷಕರಿಗೆ ಗೋಳು ತೋಡಿಕೊಂಡಿದ್ದಾರೆ. ಬಳಿಕ ಪೋಷಕರ ಬೆಂಬಲದೊಂದಿಗೆ ಮಂಗಳೂರಿಗೆ ಬಂದು ದೂರು ನೀಡಿದ್ದಾರೆ.

9 ಮಂದಿ ಸೀನಿಯರ್ಸ್ ವಿರುದ್ಧ ಗಂಭೀರ ಕೇಸ್:

ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ನಾಸೀದ್ ಅಮೀರ್ (A1), ಆದಿಲ್ ಎಂ. (A2), ಅರ್ಶಕ್ (A3), ಅನೀಶ್ (A4), ಉವೈಸ್ (A5), ರೋಹನ್ ರಮೇಶ್ (A6), ಆದಿಲ್ ವಿ.ಪಿ. (A7), ರೆಹಾನ್ ಎಂ.ಪಿ. (A8) ಹಾಗೂ ಶಿನಾಸ್ (A9) ವಿರುದ್ಧ ಅಪಹರಣ, ಅಕ್ರಮ ಬಂಧನ, ಹಲ್ಲೆ, ಜೀವಬೆದರಿಕೆ, ಕೊಲೆಯತ್ನ ಹಾಗೂ ರ‍್ಯಾಗಿಂಗ್ ತಡೆ ಕಾಯ್ದೆಯಡಿ (BNS ಸೆಕ್ಷನ್ 140(3), 127(2), 115(2), 118(1), 351(2), 109, 190 ಹಾಗೂ ಕರ್ನಾಟಕ ಎಜುಕೇಶನ್ ಆಕ್ಟ್ ಸೆಕ್ಷನ್ 116) ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.