ಯಾದಗಿರಿ: ಕಳೆದ ಎಂಟು ವರ್ಷಗಳಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಪ್ರಿಯಕರನಿಗೆ ಕೈಕೊಟ್ಟು ಬೇರೆ ಯುವಕನೊಂದಿಗೆ ಮದುವೆಯಾಗಲು ಸಜ್ಜಾಗಿರುವ ಲೇಡಿ ಕಾನ್ಸ್‌ಟೇಬಲ್ ವಿರುದ್ಧ ಪಿಎಸ್ಐ ಒಬ್ಬರು ರಾಯಚೂರು ಎಸ್ಪಿ ಮೊರೆ ಹೋಗಿದ್ದಾರೆ. ಯಾದಗಿರಿಯ ಶಹಾಪುರದಲ್ಲಿ ಗುಪ್ತಚರ ಇಲಾಖೆಯಲ್ಲಿ ಪಿಎಸ್ಐ ಆಗಿರುವ ವಿರೇಶ್ ಮತ್ತು ಕಾನ್ಸ್‌ಟೇಬಲ್ ವಿಜಯಶ್ರೀ 2017ರಿಂದ ಪ್ರೀತಿಸುತ್ತಿದ್ದರು. ವಿಜಯಪುರದಲ್ಲಿ ವಿದ್ಯಾಭ್ಯಾಸ ಮಾಡುವಾಗ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು.
ವಿರೇಶ್ ಪಿಎಸ್ಐ ಆಗಿ ನೇಮಕಗೊಂಡ ಬಳಿಕ, ವಿಜಯಶ್ರೀಯೂ ಕಾನ್ಸ್‌ಟೇಬಲ್ ಆಗಿ ಕೆಲಸಕ್ಕೆ ಸೇರಿದ್ದರು. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಇಬ್ಬರೂ ನಾಲ್ಕು ವರ್ಷಗಳ ಕಾಲ ಒಂದೇ ಮನೆಯಲ್ಲಿ ಜೊತೆಯಾಗಿ ವಾಸವಿದ್ದರು. ಅಷ್ಟೇ ಅಲ್ಲದೆ, ದೇವಸ್ಥಾನವೊಂದರಲ್ಲಿ ಹಾರ ಬದಲಾಯಿಸಿಕೊಂಡು ಮದುವೆಯಾಗಿದ್ದರು ಎಂದು ವಿರೇಶ್ ಹೇಳಿದ್ದಾರೆ.
'ವಿಜಯಶ್ರೀ ನನ್ನಿಂದ ಸುಮಾರು 35 ಲಕ್ಷ ರೂ. ಹಣ ಪಡೆದಿದ್ದಾಳೆ. ಎರಡು ಬಾರಿ ಗರ್ಭಿಣಿಯಾಗಿದ್ದ ಸಂದರ್ಭ ತನಗೆ ಗೊತ್ತಿಲ್ಲದಂತೆ ಅಬಾರ್ಷನ್ ಮಾಡಿಸಿದ್ದಾಳೆ. ಇದೀಗ ಅಧಿಕೃತವಾಗಿ ರಿಜಿಸ್ಟರ್ ಮದುವೆ ಮಾಡಿಕೊಳ್ಳೋಣ ಅಂದಾಗ ಜಾತಿಯ ನೆಪ ಹೇಳಿ ಬೇರೆ ಯುವಕನೊಂದಿಗೆ ಮದುವೆಗೆ ಸಜ್ಜಾಗಿದ್ದಾಳೆ' ಎಂದು ವಿರೇಶ್ ಆರೋಪಿಸಿದ್ದಾರೆ.
ವಿಜಯಶ್ರೀಯವರ ಮದುವೆ ಮೇ 7 ರಂದು ರಾಯಚೂರಿನಲ್ಲಿ ನಿಶ್ಚಯವಾಗಿದೆ. ತನಗೆ ನ್ಯಾಯ ಸಿಗಬೇಕು ಮತ್ತು ಈ ಮದುವೆ ನಡೆಯಬಾರದು ಎಂದು ವಿರೇಶ್ ಈಗ ಆನ್‌ಲೈನ್ ಮೂಲಕ ದೂರು ನೀಡಿದ್ದಾರೆ. ಇಬ್ಬರೂ ಒಂದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಈ ಪ್ರೀತಿ ಮತ್ತು ವಂಚನೆಯ ಪ್ರಕರಣವು ಈಗ ಹಾದಿಬೀದಿ ಹೈಡ್ರಾಮಾದಂತಾಗಿ ಇಲಾಖೆಗೆ ಮುಜುಗರ ತಂದಿದೆ.