ಮಂಗಳೂರು:
ವಿಮಾನ ಸಂಪರ್ಕ (Connecting Flight) ತಪ್ಪಿದ ಹಿನ್ನೆಲೆಯಲ್ಲಿ ಸಂಸ್ಥೆಯ ವತಿಯಿಂದ ಹೋಟೆಲ್ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆಯ ಪ್ರಯಾಣಿಕರೊಬ್ಬರು ನಿಧನರಾದ ಘಟನೆ ಸುರತ್ಕಲ್ನಲ್ಲಿ ನಡೆದಿದೆ.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ 'ಬೀಚ್ ಹೆವೆನ್' (Beach Heaven) ಹೋಟೆಲ್ನಲ್ಲಿ ಈ ಘಟನೆ ಸಂಭವಿಸಿದೆ. ವಿಮಾನ ಮಿಸ್ ಆಗಿದ್ದರಿಂದ ಪ್ರಯಾಣಿಕರಿಗೆ ತಂಗಲು ಏರ್ ಇಂಡಿಯಾ ಎಕ್ಸ್ಪ್ರೆಸ್ ವತಿಯಿಂದಲೇ ಈ ಹೋಟೆಲ್ನಲ್ಲಿ ಕೊಠಡಿ ಕಾಯ್ದಿರಿಸಲಾಗಿತ್ತು.
ಏರ್ ಇಂಡಿಯಾ ಎಕ್ಸ್ಪ್ರೆಸ್ ಅಧಿಕೃತ ಸ್ಪಷ್ಟೀಕರಣ:
ಘಟನೆ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ ಎಕ್ಸ್ಪ್ರೆಸ್ ವಕ್ತಾರರು, "ನಮ್ಮ ವಿಮಾನಯಾನ ಸಂಸ್ಥೆಯಿಂದ ಮಂಗಳೂರಿನ ಹೋಟೆಲ್ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದ್ದ ಪ್ರಯಾಣಿಕರೊಬ್ಬರ ನಿಧನ ನಮಗೆ ತೀವ್ರ ದುಃಖ ತಂದಿದೆ. ಮೃತರ ಕುಟುಂಬಕ್ಕೆ ನಮ್ಮ ಭಾವಪೂರ್ಣ ಸಂತಾಪಗಳನ್ನು ವ್ಯಕ್ತಪಡಿಸುತ್ತೇವೆ. ಸಂಕಷ್ಟದ ಈ ಸಮಯದಲ್ಲಿ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ನೆರವು ನೀಡಲಿದ್ದೇವೆ. ಹಾಗೆಯೇ ಸ್ಥಳೀಯ ಅಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕಾರ ಮುಂದುವರಿಸಲಿದ್ದೇವೆ," ಎಂದು ಹೇಳಿದ್ದಾರೆ.
ಘಟನೆ ಕುರಿತು ಸುರತ್ಕಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖಾ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ.
