ಮಂಗಳೂರು: ಕ್ಯಾಂಪಸ್‌ಗಳಲ್ಲಿ ಮಾದಕದ್ರವ್ಯ ತಡೆಗೆ ಕಾಲೇಜು ಆಡಳಿತ ಮಂಡಳಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿ, ನಗರದ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳಿಂದ 290 ಗ್ರಾಂ ಗಾಂಜಾ ಪತ್ತೆಯಾಗಿದೆ. ಸ್ವಯಂಪ್ರೇರಿತವಾಗಿ ಕಾರ್ಯಾಚರಣೆ ನಡೆಸಿ ಗಾಂಜಾ ಸಹಿತ ಮೂವರು ವಿದ್ಯಾರ್ಥಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಕಾಲೇಜು ಆಡಳಿತ ಮಂಡಳಿಯ ನಡೆಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ವಿವರ:
ಪೊಲೀಸ್ ಇಲಾಖೆ ನಡೆಸಿದ್ದ ಮಾದಕದ್ರವ್ಯ ವಿರೋಧಿ ಜಾಗೃತಿ ಸಭೆಗಳ ಬೆನ್ನಲ್ಲೇ, ಕಾಲೇಜು ಆಡಳಿತ ಮಂಡಳಿಯು ಕ್ಯಾಂಪಸ್‌ನಲ್ಲಿ ತಪಾಸಣೆಯನ್ನು ಬಿಗಿಗೊಳಿಸಿತ್ತು. ಈ ವೇಳೆ ಸಣ್ಣ ಪ್ಯಾಕೆಟ್‌ಗಳಲ್ಲಿ ಪೂರೈಕೆಗೆ ಇಡಲಾಗಿದ್ದ 290 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಅದನ್ನು ಹೊಂದಿದ್ದ ಮೂವರು ವಿದ್ಯಾರ್ಥಿಗಳನ್ನು ಕಾಲೇಜು ಸಿಬ್ಬಂದಿ ವಶಕ್ಕೆ ಪಡೆದು ಠಾಣೆಗೆ ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಬಂಧಿತ ಮೂವರೂ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.
ಎನ್‌ಡಿಪಿಎಸ್ ಕೇಸ್ & ನ್ಯಾಯಾಲಯದ ಆದೇಶ:
ಘಟನೆ ಕುರಿತು ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕಾಲೇಜಿಗೆ ಗಾಂಜಾ ಸರಬರಾಜು ಮಾಡಿದ್ದ ಪ್ರಮುಖ ವಿದ್ಯಾರ್ಥಿಯನ್ನು ಮಾನ್ಯ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು. ವಿದ್ಯಾರ್ಥಿಯ ಶೈಕ್ಷಣಿಕ ಹಿತದೃಷ್ಟಿ ಹಾಗೂ ಆತನ ಬಳಿ ಇದ್ದ ಮಾದಕ ವಸ್ತುವಿನ ಪ್ರಮಾಣವನ್ನು ಪರಿಗಣಿಸಿದ ನ್ಯಾಯಾಲಯವು ಶ್ಯೂರಿಟಿ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮುಖ್ಯ ಪೆಡ್ಲರ್ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿಕೆ:
ಕಾಲೇಜು ಆಡಳಿತ ಮಂಡಳಿಯ ಈ ಜವಾಬ್ದಾರಿಯುತ ನಡೆಯನ್ನು ಶ್ಲಾಘಿಸಿರುವ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು, "ಕಾಲೇಜುಗಳಲ್ಲಿ ಆಂಟಿ-ಡ್ರಗ್ ಕಮಿಟಿಗಳು (ADC) ಸಕ್ರಿಯವಾಗಿ ಕಾರ್ಯಾಚರಣೆ ನಡೆಸಿ, ಗಾಂಜಾ ಪತ್ತೆಹಚ್ಚಿ ಇಲಾಖೆಗೆ ಸಹಕರಿಸುತ್ತಿರುವುದು ಅತ್ಯಂತ ಒಳ್ಳೆಯ ಬೆಳವಣಿಗೆ. ಮಂಗಳೂರಿನ ಎಲ್ಲಾ ವಿದ್ಯಾಸಂಸ್ಥೆಗಳು ಇದೇ ರೀತಿ ಕಟಿಬದ್ಧತೆಯಿಂದ ಕೆಲಸ ಮಾಡಿದರೆ, ನಮ್ಮ ಕ್ಯಾಂಪಸ್‌ಗಳನ್ನು ತಕ್ಷಣವೇ ಸಂಪೂರ್ಣ ಮಾದಕದ್ರವ್ಯ ಮುಕ್ತ ಹಾಗೂ ಆರೋಗ್ಯಕರ ವಾತಾವರಣವನ್ನಾಗಿ ಮಾಡಲು ಸಾಧ್ಯ," ಎಂದು ತಿಳಿಸಿದ್ದಾರೆ.
