ಕೌಲಾಲಂಪುರ: ಮಲೇಷ್ಯಾದ ಖ್ಯಾತ ಫುಟ್‌ಬಾಲ್ ದಂತಕಥೆ ದಾತುಕ್ ಅಬ್ದಾ ಅಲಿಫ್ ತಮ್ಮ 72ನೇ ವಯಸ್ಸಿನಲ್ಲಿ ತಮಗಿಂತ ಬರೋಬ್ಬರಿ 52 ವರ್ಷ ಕಿರಿಯಳಾದ 20 ವರ್ಷ ವಯಸ್ಸಿನ ಯುವತಿಯನ್ನು ವಿವಾಹವಾಗಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ವೃತ್ತಿಪರ ಫುಟ್‌ಬಾಲ್‌ನಿಂದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ದೂರವಿರುವ ಹಿರಿಯ ಆಟಗಾರನ ಈ ವಿವಾಹದ ಸುದ್ದಿ ಕ್ರೀಡಾಲೋಕ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಆಗಸ್ಟ್ 27ರಂದು ವಿವಾಹ – ಸಹೋದರನಿಂದ ದೃಢೀಕರಣ:
‘ಗಲ್ಫ್ ಟುಡೇ’ ವರದಿಯ ಪ್ರಕಾರ, ಅಬ್ದಾ ಅಲಿಫ್ ಅವರು ಆಗಸ್ಟ್ 27 ರಂದು 20 ವರ್ಷದ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಯನ್ನು ಅಬ್ದಾ ಅವರ ಕಿರಿಯ ಸಹೋದರ ಹಾಗೂ ಮಾಜಿ ಫುಟ್‌ಬಾಲ್ ಕೋಚ್ ಆಗಿರುವ ದಾತುಕ್ ಯೂನುಸ್ ಅಲಿಫ್ ದೃಢಪಡಿಸಿದ್ದಾರೆ.
ಪ್ರಸ್ತುತ ಅಬ್ದಾ ಅವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಮಲೇಷ್ಯಾದ ಫುಟ್‌ಬಾಲ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಆದರೆ, ಈ ವಿವಾಹದ ಕುರಿತು ಸ್ವತಃ ಅಬ್ದಾ ಅಲಿಫ್ ಅವರು ಸಾರ್ವಜನಿಕವಾಗಿ ಯಾವುದೇ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿಲ್ಲ.