ಸಾಂಪ್ರದಾಯಿಕ ಕೃಷಿಗೆ ಸೀಮಿತವಾಗದೆ, ಆಧುನಿಕ ತಂತ್ರಜ್ಞಾನ ಮತ್ತು ನವೀನ ಬೆಳೆಗಳ ಮೂಲಕ ಬಂಜರು ಭೂಮಿಯಲ್ಲೂ ಚಿನ್ನ ಬೆಳೆಯಬಹುದು ಎಂಬುದನ್ನು ಮಹಾರಾಷ್ಟ್ರದ ರೈತನೊಬ್ಬ ಸಾಬೀತುಪಡಿಸಿದ್ದಾರೆ. ಕೇವಲ 3 ಎಕರೆ ಜಮೀನಿನಲ್ಲಿ ಆರಂಭಿಸಿದ ಡ್ರ್ಯಾಗನ್ ಫ್ರೂಟ್ (Dragon Fruit) ಕೃಷಿಯನ್ನು ಬರೋಬ್ಬರಿ 60 ಎಕರೆಗೆ ವಿಸ್ತರಿಸಿ, ಇಂದು ವಾರ್ಷಿಕ ₹2 ಕೋಟಿ ವಹಿವಾಟು ನಡೆಸುತ್ತಿರುವ ಯುವ ರೈತ ಮಹೇಶ್ ಅಸಬೆ ಅವರ ಯಶೋಗಾಥೆ ಈಗ ದೇಶದ ರೈತ ಸಮುದಾಯಕ್ಕೆ ದೊಡ್ಡ ಪ್ರೇರಣೆಯಾಗಿದೆ.
ಸೋಲಾಪುರದ ಅಕೋಲಾ ಗ್ರಾಮದ ಮಹೇಶ್ ಅಸಬೆ, ‘ರುಕ್ಮಿಣಿ ಫಾರ್ಮ್ಸ್ ಆ್ಯಂಡ್ ನರ್ಸರಿ’ಯ (Rukmini Farms and Nursery) ಸಂಸ್ಥಾಪಕರಾಗಿದ್ದು, ಕೃಷಿ ಇಂಜಿನಿಯರಿಂಗ್ನಲ್ಲಿ ಬಿ.ಟೆಕ್ ಹಾಗೂ ಫುಡ್ ಪ್ರೊಸೆಸಿಂಗ್ನಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ.
ಬಾಂಗ್ಲಾದೇಶದಿಂದ 9,000 ಸಸಿಗಳ ತಂದು ಕೃಷಿ ಆರಂಭ:
ಮಹೇಶ್ ಕುಟುಂಬ ಈ ಹಿಂದೆ ಮೆಕ್ಕೆಜೋಳದಂತಹ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿತ್ತು. 2013-14ರಲ್ಲಿ ಮಹೇಶ್ ಅವರ ತಂದೆಯವರು ಡ್ರ್ಯಾಗನ್ ಫ್ರೂಟ್ ಬೆಳೆಗೆ ಕಡಿಮೆ ನೀರು ಸಾಕು ಮತ್ತು ಒಣಭೂಮಿಯಲ್ಲೂ ಸಮೃದ್ಧವಾಗಿ ಬೆಳೆಯುತ್ತದೆ ಎಂಬ ಮಾಹಿತಿಯನ್ನು ಓದಿ ತಿಳಿದುಕೊಂಡರು.
ಆ ಬಳಿಕ ಸಾಹಸಕ್ಕೆ ಕೈಹಾಕಿದ ಕುಟುಂಬ, ಬಾಂಗ್ಲಾದೇಶದಿಂದ ಸುಮಾರು 9,000 ಡ್ರ್ಯಾಗನ್ ಫ್ರೂಟ್ ಸಸಿಗಳನ್ನು ತರಿಸಿಕೊಂಡಿತು. ಆರಂಭಿಕವಾಗಿ ಸಸಿಗಳ ಖರೀದಿಗಾಗಿ ₹9.9 ಲಕ್ಷ ಹೂಡಿಕೆ ಮಾಡಲಾಗಿತ್ತು. ಮಹಾರಾಷ್ಟ್ರದಲ್ಲಿ ಈ ಹಣ್ಣನ್ನು ಬೆಳೆದ ಆರಂಭಿಕ ಬೆರಳೆಣಿಕೆಯ ರೈತರಲ್ಲಿ ಮಹೇಶ್ ಕುಟುಂಬವೂ ಒಂದಾಯಿತು.
ಆರಂಭಿಕ ಸವಾಲು – ಆದಾಯದ ಜಿಗಿತ:
- ಮೊದಲ ಕೊಯ್ಲು (2015-16): 3 ಎಕರೆ ಜಮೀನಿನಲ್ಲಿ ಮೊದಲ ಬಾರಿಗೆ ಪ್ರತಿ ಎಕರೆಗೆ ಸುಮಾರು 5 ಟನ್ ಇಳುವರಿ ಬಂತು. ಆರಂಭದಲ್ಲಿ ಮಾರುಕಟ್ಟೆ ಪರಿಚಯವಿಲ್ಲದೆ ಕೆ.ಜಿ.ಗೆ ಕೇವಲ ₹33 ರಂತೆ ಮಾರಿ ₹5 ಲಕ್ಷ ಆದಾಯ ಗಳಿಸಿದರು.
- ದರ ಏರಿಕೆ (2017): ಗುಣಮಟ್ಟ ಮತ್ತು ಬೇಡಿಕೆ ಹೆಚ್ಚಾದಂತೆ ಕೆ.ಜಿ.ಗೆ ₹150 ರಿಂದ ₹250 ರವರೆಗೆ ದರ ದೊರೆಯತೊಡಗಿತು.
ಇಸ್ರೇಲ್, ವಿಯೆಟ್ನಾಂ ಪ್ರವಾಸ – ತಂತ್ರಜ್ಞಾನದ ಅಳವಡಿಕೆ:
ಕೃಷಿ ಅಧ್ಯಯನದ ಭಾಗವಾಗಿ ಮಹೇಶ್ ಇಸ್ರೇಲ್ಗೆ ತೆರಳಿ 45 ದಿನಗಳ ಕಾಲ ಅತ್ಯಾಧುನಿಕ ನೀರು ನಿರ್ವಹಣೆ ಮತ್ತು ಕೃಷಿ ತಂತ್ರಜ್ಞಾನದ ತರಬೇತಿ ಪಡೆದರು. 2018ರಲ್ಲಿ ಡ್ರ್ಯಾಗನ್ ಫ್ರೂಟ್ ಕೃಷಿಯ ತವರೂರಾದ ವಿಯೆಟ್ನಾಂಗೆ ಭೇಟಿ ನೀಡಿ ಅಲ್ಲಿನ ಬೇಸಾಯ ಪದ್ಧತಿಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರು.
ಅಲ್ಲಿ ಕಲಿತ ಜ್ಞಾನವನ್ನು ತಮ್ಮ ತೋಟದಲ್ಲಿ ಪ್ರಾಯೋಗಿಕವಾಗಿ ಅಳವಡಿಸಿಕೊಂಡು, ಹನಿ ನೀರಾವರಿ (Drip irrigation), ಕೃಷಿ ಹೊಂಡ ಹಾಗೂ ಕಳೆ ತೆಗೆಯುವ ಯಂತ್ರಗಳ ಬಳಕೆಯ ಮೂಲಕ ಶ್ರಮ ಮತ್ತು ನೀರಿನ ಬಳಕೆಯನ್ನು ಗಣನೀಯವಾಗಿ ತಗ್ಗಿಸಿದರು.
60 ಎಕರೆಗೆ ವಿಸ್ತರಣೆ – ವಾರ್ಷಿಕ ₹2 ಕೋಟಿ ವಹಿವಾಟು:
ಇಂದು ಮಹೇಶ್ ಅವರ ‘ರುಕ್ಮಿಣಿ ಫಾರ್ಮ್ಸ್’ ಬರೋಬ್ಬರಿ 60 ಎಕರೆಗೆ ವಿಸ್ತಾರಗೊಂಡಿದೆ. ತೋಟದಲ್ಲಿ ಕೇವಲ ಡ್ರ್ಯಾಗನ್ ಫ್ರೂಟ್ ಮಾತ್ರವಲ್ಲದೆ ದಾಳಿಂಬೆ, ಸೀತಾಫಲ ಹಾಗೂ ಪೇರಳೆ ಹಣ್ಣುಗಳನ್ನೂ ಬೆಳೆಯಲಾಗುತ್ತಿದೆ.
- ವಾರ್ಷಿಕ ಉತ್ಪಾದನೆ: ವರ್ಷಕ್ಕೆ ಸುಮಾರು 200 ಟನ್ ಡ್ರ್ಯಾಗನ್ ಫ್ರೂಟ್ ಇಳುವರಿ.
- ಆದಾಯ: ಕೇವಲ ಡ್ರ್ಯಾಗನ್ ಫ್ರೂಟ್ ಮಾರಾಟದಿಂದಲೇ ವರ್ಷಕ್ಕೆ ₹1.25 ಕೋಟಿ ಆದಾಯ ಬರುತ್ತಿದ್ದು, ಉಳಿದ ಹಣ್ಣುಗಳ ಮಾರಾಟವನ್ನೂ ಸೇರಿಸಿ ವಾರ್ಷಿಕ ಒಟ್ಟು ವಹಿವಾಟು ₹2 ಕೋಟಿಗೆ ತಲುಪಿದೆ.
ಉನ್ನತ ಶಿಕ್ಷಣ ಪಡೆದರೂ ವಿದೇಶಿ ಅಥವಾ ಕಾರ್ಪೊರೇಟ್ ಉದ್ಯೋಗದ ಬೆನ್ನುಬೀಳದೆ, ಕೃಷಿಯನ್ನೇ ವ್ಯವಹಾರಿಕವಾಗಿ ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಿರುವ ಮಹೇಶ್ ಅಸಬೆ ಅವರ ಯಶಸ್ಸು ಯುವ ಪೀಳಿಗೆಗೆ ಹೊಸ ದಿಕ್ಕು ತೋರಿಸಿದೆ.
