ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ವಾಯುಪಡೆ ಅಧಿಕಾರಿ ಪತ್ನಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ- ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್, ಬಲವಂತದ ಮತಾಂತರಕ್ಕೆ ಯತ್ನ, ಇಬ್ಬರು ಅರೆಸ್ಟ್




ನಾಗ್ಪುರ: ಭಾರತೀಯ ವಾಯುಪಡೆ ಅಧಿಕಾರಿಯೊಬ್ಬರ ಪತ್ನಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದಲ್ಲದೆ, ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಗುರದಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಂತ್ರಸ್ತ ಮಹಿಳೆ (24) ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಆಕೆಯ ಹಳೆಯ ಸಹಪಾಠಿ ಅಯಾಜ್ ತಾಜ್ ಮದಾರೆ (26) ಎಂಬವನು ಆಸ್ತಿ ವ್ಯವಹಾರದ ನೆಪದಲ್ಲಿ ಹೋಟೆಲ್ ಒಂದಕ್ಕೆ ಕರೆಸಿಕೊಂಡಿದ್ದಾನೆ. ಅಲ್ಲಿ ಆಕೆಗೆ ಅಮಲು ಪದಾರ್ಥ ಬೆರೆಸಿದ ಜ್ಯೂಸ್ ನೀಡಿ, ಪ್ರಜ್ಞೆ ತಪ್ಪಿದ ಬಳಿಕ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ಅತ್ಯಾಚಾರದ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಚಿತ್ರೀಕರಿಸಿಕೊಂಡು ಬ್ಲಾಕ್ಮೇಲ್ ಮಾಡಿದ್ದಾಗಿ ದೂರು ನೀಡಲಾಗಿದೆ.

ಆರೋಪಿ ಅಯಾಜ್ ಅಶ್ಲೀಲ ವಿಡಿಯೋಗಳನ್ನು ಇಟ್ಟುಕೊಂಡು ಮಹಿಳೆಯನ್ನು ಬ್ಲಾಕ್‌ಮೇಲ್ ಮಾಡಿದ್ದು, ಹಲವು ಬಾರಿ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ ಆಕೆಯಿಂದ ಬರೋಬ್ಬರಿ 3.09 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಿದ್ದಾನೆ. ಮೇ 2025ರಲ್ಲಿ ಆರೋಪಿಯು ಮಹಿಳೆಯನ್ನು ಕಲ್ಮೇಶ್ವರಕ್ಕೆ ಕರೆದೊಯ್ದು, ತನ್ನ ಸಹಚರರಾದ ಅಮೀನ್ ಶೇಖ್ ಮತ್ತು ಹಜರತ್ ಮೌಲಾನಾ ಎಂಬವರೊಂದಿಗೆ ಸೇರಿ ಬಲವಂತ ಮತಾಂತರಿಸಲು ವಿಧಿ ವಿಧಾನಗಳನ್ನು ನೆರವೇರಿಸಿದ್ದಾನೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯು 'ನನ್ನನ್ನು ಬಿಟ್ಟುಬಿಡಿ' ಎಂದು ಗೋಗರೆಯುತ್ತಿದ್ದರೂ, ಆರೋಪಿ ಆಕೆಯ ಕೈಗಳನ್ನು ಬಲವಂತವಾಗಿ ಹಿಡಿದು ಧಾರ್ಮಿಕ ಶ್ಲೋಕಗಳನ್ನು ಪಠಿಸುತ್ತಿರುವುದು ಕಂಡುಬಂದಿದೆ.

 ಅಯಾಜ್ ತಾಜ್ ಮದಾರೆಯ ಕಿರುಕುಳ ಸಹಿಸಲಾರದೆ ಇತ್ತೀಚೆಗೆ ಆಕೆ ತನ್ನ ಪತಿಗೆ ಈ ಎಲ್ಲಾ ವಿಷಯಗಳನ್ನು ತಿಳಿಸಿದ್ದು, ತಕ್ಷಣವೇ ಸೋನೆಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಅತ್ಯಾಚಾರ, ಸುಲಿಗೆ, ಬಲವಂತದ ಧರ್ಮಾಂತರ ಹಾಗೂ ಮಹಾರಾಷ್ಟ್ರದ ಬ್ಲಾಕ್ ಮ್ಯಾಜಿಕ್ (ಮಾಟಮಂತ್ರ ನಿಷೇಧ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಪ್ರಮುಖ ಆರೋಪಿ ಅಯಾಜ್ ಮದಾರೆ ಮತ್ತು ಅಮೀನ್ ಶೇಖ್‌ನನ್ನು ಬಂಧಿಸಲಾಗಿದ್ದು, ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡ ಮೂರನೇ ಆರೋಪಿ ಹಜರತ್ ಮೌಲಾನಾ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.