ಮನೆ ಕಳವು ದೃಶ್ಯ ಲೈವ್ ವೀಕ್ಷಿಸಿದ ದುಬ್ಬಾಯಲ್ಲಿರುವ ಯಜಮಾನ!
ಕಾಸರಗೋಡು: ಕಾಸರಗೋಡು ಜಿಲ್ಲೆಯ ಉದುಮ ಮಾಂಗಾಡ್‌ನಲ್ಲಿ ಅಲೆಮಾರಿಗಳು ಶನಿವಾರ ಹಗಲು ವೇಳೆಯಲ್ಲಿಯೇ ಯಾರೂ ಇಲ್ಲದ ಒಂದು ಮನೆಯ ಆವರಣದ ಒಳಗೆ ಪ್ರವೇಶಿಸಿ ಕಳ್ಳತನ ನಡೆಸಿದ್ದಾರೆ. ಇದನ್ನು ಮನೆ ಮಾಲಕ ದುಬ್ಬಾಯಲ್ಲಿ ಕುಳಿತುಕೊಂಡು ಊರಿನಲ್ಲಿರುವ ತನ್ನ ಮನೆಯಲ್ಲಿ ನಡೆದ ಕಳ್ಳತನದ ಲೈವ್ ವೀಕ್ಷಿಸಿದ್ದಾರೆ!
ಈ ಸಂದರ್ಭ ಮನೆಮಂದಿ ಎಲ್ಲರೂ ಹೊರಗೆ ತೆರಳಿದ್ದರು. ಮನೆ ನೋಡಿಕೊಳ್ಳುತ್ತಿದ್ದ ವ್ಯಕ್ತಿಯೂ ಇರಲಿಲ್ಲ. ಮನೆಗೆ ಹೊಸ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸಿರುವ ಹಿನ್ನೆಲೆಯಲ್ಲಿ ಹಳೆಯ ಯಂತ್ರದ ಭಾಗಗಳನ್ನು ಅಂಗಳದಲ್ಲಿ ಇಡಲಾಗಿತ್ತು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡ ಅಲೆಮಾರಿಗಳು ಗೇಟು ತೆಗೆದು ಒಳಗೆ ಆಗಮಿಸಿ ಆ ಯಂತ್ರದ ಭಾಗಗಳನ್ನು ಕದ್ದೊಯ್ದಿದ್ದಾರೆ.
ಕಳವು ಕೃತ್ಯವನ್ನು ಸಿಸಿ ಟಿವಿ ಮೂಲಕ ದುಬ್ಬಾಯಲ್ಲಿ ಕುಳಿತು ವೀಕ್ಷಿಸಿದ ಮನೆ ಮಾಲಕ ಕೂಡಲೇ ಪೊಲೀಸರು ಮತ್ತು ಹತ್ತಿರದ ಮನೆಯವರಿಗೆ ಮಾಹಿತಿ ನೀಡಿದರು. ಆದರೆ ಪೊಲೀಸರು ಆಗಮಿಸುವ ವೇಳೆಗೆ ಕಳ್ಳತನ ನಡೆಸಿದ ಅಲೆಮಾರಿಗಳು ಪರಾರಿಯಾಗಿದ್ದರು.
ಪೊಲೀಸ್ ತನಿಖೆ ಸಂದರ್ಭದಲ್ಲಿ ಕಳವು ನಡೆಸಿದ ವಸ್ತುಗಳು ಕಳ್ಳಾಡಿನ ಗುಜರಿ ಅಂಗಡಿಯಲ್ಲಿ ಪತ್ತೆಯಾಗಿವೆ.
ಮನೆ ಮಾಲಕ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲು ಆಸಕ್ತಿ ತೋರಿಲ್ಲ.
