ಬಾಲಕಿಯೊಂದಿಗೆ ಮಲ್ಲಿಕಾರ್ಜುನ ಮುತ್ಯಾ ಅನುಚಿತವಾಗಿ ವರ್ತಿಸಿರುವ ವಿಡಿಯೋ ವೈರಲ್: ಮಕ್ಕಳ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು



ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ರೋಜಾ ಮಹೆಲ್ ಗ್ರಾಮದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ಅಸಭ್ಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಮುತ್ಯಾ ಅಪ್ರಾಪ್ತೆಯೊಂದಿಗೆ ಡ್ಯಾನ್ಸ್ ಮಾಡುವ ವೇಳೆ ಆಕೆಯ ಕುತ್ತಿಗೆ ಹಿಡಿದು ಎತ್ತಿ ಮಂಚದ ಮೇಲೆ ನಿಲ್ಲಿಸುವುದು, ಮೂಗು ಚಿವುಟುವುದು ಹಾಗೂ ಅಸಭ್ಯವಾಗಿ ಸ್ಪರ್ಶಿಸುವ ದೃಶ್ಯಗಳು ವಿಡಿಯೋದಲ್ಲಿ ಕಂಡುಬರುತ್ತಿವೆ.

ಘಟನೆಯ ಸಂದರ್ಭ ಸ್ಥಳದಲ್ಲಿದ್ದ ಕೆಲ ಮಹಿಳೆಯರು ಮತ್ತು ಪುರುಷರು ವಿರೋಧ ವ್ಯಕ್ತಪಡಿಸದೇ ನಿಂತಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ. Instagram ಮತ್ತು Facebook ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೆಯಾಗಿದ್ದು, ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಗ್ರಹಿಸಿದ್ದಾರೆ.

ಸಾರ್ವಜನಿಕರು ಮೂಢನಂಬಿಕೆಗಳಿಂದ ದೂರವಿದ್ದು ಇಂತಹ ಘಟನೆಗಳನ್ನು ಖಂಡಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಅಪ್ರಾಪ್ತೆಯೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ವೈರಲ್​​ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದೆ. ಪ್ರಕರಣ ದಾಖಲು ಮಾಡಿಕೊಂಡ ಬಳಿಕ ಯಾದಗಿರಿ ಎಸ್​ಪಿಗೆ ಪತ್ರ ಬರೆದಿರುವ ಆಯೋಗ, ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೋರಿದೆ. ಪೊಲೀಸ್​​ ಇಲಾಖೆ ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳೋದಾಗಿ ಆಯೊಗದ ಅಧ್ಯಕ್ಷ ಶಶಿಧರ್ ಕೋಸುಂಬೆ ತಿಳಿಸಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu