ಬೆಳ್ತಂಗಡಿ: ಮಂಗಳೂರಿನ ಕಾಲೇಜು ಸೇರ್ಪಡೆಗೆ ಅಪಹರಣ ನಾಟಕ- ಪೊಲೀಸ್ ತನಿಖೆಯಲ್ಲಿ ಯುವತಿಯ ಕಟ್ಟುಕತೆ ಬಯಲು


ಬೆಳ್ತಂಗಡಿ: ಮಂಗಳೂರಿನ ಕಾಲೇಜು ಸೇರಲು ಕಿಡ್ನಾಪ್ ಡ್ರಾಮಾ ಸೃಷ್ಟಿಸಿದ ಕಾಲೇಜು ಕನ್ಯೆಯ ನಾಟಕ ಪೊಲೀಸ್ ತನಿಖೆಯಲ್ಲಿ ಬದಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸೋಮವಾರ ನಡೆದಿದೆ ಎನ್ನಲಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯ ಕಿಡ್ನ್ಯಾಪ್ ಯತ್ನ ಪ್ರಕರಣ ಎಲ್ಲರನ್ನೂ ಆತಂಕಕ್ಕೆ ದೂಡಿತ್ತು. ಮೂವರು ಕಾರಿನಲ್ಲಿ ಬಂದು ಕಿಡ್ನ್ಯಾಪ್‌ಗೆ ಯತ್ನಿಸಿದ್ದಲ್ಲದೆ, ಕೈಗೆ ಚೂರಿಯಿಂದ ಇರಿದಿದ್ದಾರೆ. ಅದೇ ಸಂದರ್ಭ ಯಾರೋ ವ್ಯಕ್ತಿಯೋರ್ವರು ಬಂದಿದ್ದರಿಂದ ಅಪಹರಣಕಾರರು ತನ್ನನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು ಎಂದು ಯುವತಿ ಹೇಳಿಕೆ ನೀಡಿದ್ದಳು.

ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯನ್ನು ಭೇಟಿಯಾಗಲು ಶಾಸಕ ಹರೀಶ್ ಪೂಂಜಾ ಕೂಡ ದೌಡಾಯಿಸಿ ಮಾತುಕತೆ ನಡೆಸಿದ್ದರು. ಬೆಳ್ತಂಗಡಿ ಪೊಲೀಸರಲ್ಲಲ್ಲದೆ, ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳೂರಿನಿಂದ ದೌಡಾಯಿಸಿದ್ದರು. ನಿನ್ನೆ ಇಡೀ ದಿನ ಪೊಲೀಸರು ಈ ಬಗ್ಗೆ ಕಣ್ಣಿಗೆ ಎಣ್ಣೆ ಬಿಟ್ಟು ಕಾರ್ಯಾಚರಣೆ ನಡೆಸಿದ್ದರು.

ಪೊಲೀಸರು ತನಿಖೆ ಚುರುಕುಗೊಳಿಸುತ್ತಿದ್ದಂತೆ ಬಾಲಕಿಯ ಕಿಡ್ನ್ಯಾಪ್ ಡ್ರಾಮಾ ಬಯಲಿಗೆ ಬಂದಿದ್ದು, ಆಕೆಯ ಬಾಯಿಂದಲೇ ಕಟ್ಟುಕತೆ ಬಯಲಾಗಿದೆ. ಆಕೆಗೆ ಮಂಗಳೂರಿನಲ್ಲಿರುವ ಪಿಯುಸಿ ಕಾಲೇಜು ಸೇರ್ಪಡೆಯಾಗಬೇಕಿತ್ತು. ಆದರೆ ಮನೆಯವರು ಬೆಳ್ತಂಗಡಿಯಲ್ಲೇ ಕಾಲೇಜಿಗೆ ಸೇರಿಸಿದ್ದರು. ಆದ್ದರಿಂದ ಕಿಡ್ನಾಪ್ ಡ್ರಾಮಾ ಮಾಡಿದ್ದಲ್ಲಿ ಮನೆಯವರು ಮಂಗಳೂರಿ‌ನ ಪಿಯುಸಿ ಕಾಲೇಜಿಗೆ ಸೇರಿಸುತ್ತಾರೆ ಅನ್ನುವ ಪ್ಲ್ಯಾನ್ ಮಾಡಿದ್ದಳು.

ಅದಕ್ಕಾಗಿ ಆಕೆ ತಾನೇ ಕಿಡ್ನ್ಯಾಪ್ ಡ್ರಾಮಾ ಸೃಷ್ಟಿಸಿದ್ದಳು. ಬ್ಯಾಗ್ ನಲ್ಲಿರೋ ಪುಸ್ತಕಗಳನ್ನು ಮನೆಯಲ್ಲೇ ಸುಟ್ಟು ಹಾಕಿದ್ದಳು. ಶಾಲಾ ಬ್ಯಾಗ್ ಅನ್ನು ದಾರಿಯಲ್ಲೇ ಬಿಸಾಕಿದ್ದಳು. ವಿದ್ಯಾರ್ಥಿನಿ ಸ್ಕೂಟಿಯನ್ನು ನಿಲ್ಲಿಸಿ ಬ್ಲೇಡ್‌ನಿಂದ ಕೈ ಕುಯ್ದುಕೊಂಡು ನಾಟಕ ಮಾಡಿದ್ದಳು. ಒಟ್ಟಿನಲ್ಲಿ ಕಾಲೇಜು ಕನ್ಯೆಯ ನಾಟಕಕ್ಕೇ ಪೊಲೀಸರೇ ಸುಸ್ತುಬೀಳುವಂತಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu