ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣವಾಗುವಂತೆ ಒತ್ತಡ ಹೇರಿದ್ದ ತಂದೆಯನ್ನೇ ಕೊಂದ ಪುತ್ರ


ಲಕ್ನೋ: ನಗರದ ಆಶಿಯಾನಾ ಠಾಣೆ ವ್ಯಾಪ್ತಿಯಲ್ಲಿ  ನಾಪತ್ತೆ ಆಗಿದ್ದಾರೆಂದು ದೂರು ನೀಡಿರುವ ಪುತ್ರನೇ ತನ್ನ ತಂದೆಯನ್ನು ಹತ್ಯೆ ಮಾಡಿದ್ದಾನೆ ಎಂಬ ಬೆಚ್ಚಿ ಬೀಳಿಸುವ ಸಂಗತಿ ಪೊಲೀಸ್‌ ತನಿಖೆಯಲ್ಲಿ ಬಹಿರಂಗವಾಗಿದೆ. ನೀರು ತುಂಬಿಸುವ ಡ್ರಮ್‌ನೊಳಗಡೆ ಪತ್ತೆಯಾದ ರುಂಡ ಬೇರ್ಪಟ್ಟ ಅರ್ಧ ದೇಹ ನೋಡಿ ಪೊಲೀಸರೇ ದಿಗ್ಧಮೆಗೊಂಡಿದ್ದಾರೆ.

ವರ್ಧಮಾನ ಪ್ಯಾಥಾಲಜಿ ಮಾಲಕ ಮನ್ಹೇಂದ್ರ ಸಿಂಗ್ ಪುತ್ರನಿಂದ ಕೊಲೆಯಾದ ತಂದೆ. ಫೆಬ್ರವರಿ 20ರಿಂದ ಮನ್ಹೇಂದ್ರ ಸಿಂಗ್ ಕಾಣೆಯಾಗಿದ್ದಾರೆ ಎಂದು ಪುತ್ರ ಅಕ್ಷತ್ ಪೊಲೀಸರಿಗೆ ದೂರು ನೀಡಿದ್ದ. ಆದರೆ ಘಟನೆ ನಡೆದ ಎರಡೇ ದಿನಗಳಲ್ಲಿ ಪ್ರಕರಣ ತೀವ್ರ ತಿರುವು ಪಡೆದುಕೊಂಡಿತ್ತು.

ಅಕ್ಷತ್ ಮೊದಲಿಗೆ, "ತಂದೆ ದೆಹಲಿಗೆ ಹೋಗುತ್ತಿದ್ದೇನೆ ಎಂದು ಹೇಳಿ ಬೆಳಗ್ಗೆ ಮನೆಯಿಂದ ಹೊರಟಿದ್ದರು. ಮರುದಿನ ವಾಪಸ್ ಬರುತ್ತೇನೆ ಎಂದರೂ ಬಂದಿಲ್ಲ. ಅವರ ಮೂರು ಮೊಬೈಲ್‌ಗಳು ಸ್ವಿಚ್‌ ಆಫ್ ಆಗಿವೆ'' ಎಂದು ಹೇಳಿದ್ದ. ಫೋನ್ ಕೊನೆಯ ಲೊಕೇಶನ್ ಕಾಕೋರಿ ಪ್ರದೇಶದಲ್ಲಿ ಪತ್ತೆಯಾಗಿದೆ. ಆದರೆ ಮೊಬೈಲ್ ಸಿಕ್ಕಿರಲಿಲ್ಲ. ಅನುಮಾನಗೊಂಡ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದಾಗ, ಪಾಪಿ ಪುತ್ರ ಸತ್ಯ ಒಪ್ಪಿಕೊಂಡಿದ್ದಾನೆ. 

ಫೆಬ್ರವರಿ 20ರಂದು ಬೆಳಗ್ಗೆ ಸುಮಾರು 4:30ರ ಸುಮಾರಿಗೆ ತಂದೆ-ಮಗನ ನಡುವೆ ಜಗಳ ನಡೆದಿದೆ. ಈ ವೇಳೆ ಪರವಾನಿಗೆ ಪಡೆದ ಬಂದೂಕಿನಿಂದ ತಂದೆಯ ತಲೆಗೆ ಗುಂಡು ಹಾರಿಸಿದ್ದಾಗಿ ಅಕ್ಷತ್ ಒಪ್ಪಿಕೊಂಡಿದ್ದಾನೆ. ಗುಂಡು ತಾಗುತ್ತಿದ್ದಂತೆ ಮನ್ಹೇಂದ್ರ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂತರ ಮೃತದೇಹವನ್ನು ಮೂರನೇ ಮಹಡಿಯಿಂದ ಕೆಳಗೆ ತಂದು ಕತ್ತರಿಸಿ, ಕೆಲವು ಭಾಗಗಳನ್ನು ಕಾರಿನಲ್ಲಿ ತೆಗೆದುಕೊಂಡು ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾನೆ. ಉಳಿದ ಭಾಗವನ್ನು ಮನೆಯಲ್ಲೇ ನೀಲಿ ಡ್ರಮ್‌ನಲ್ಲಿ ಮುಚ್ಚಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಗೆ ಕಾರಣವೇನು?

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ತಂದೆ ಒತ್ತಡ ಹೇರಿದ್ದರು. ಇದರಿಂದ ಕೋಪಗೊಂಡ ಮಗ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಅಕ್ಷತ್‌ನ ತಂಗಿ ಈ ಘಟನೆಗೆ ಸಾಕ್ಷಿಯಾಗಿದ್ದರೂ, ಬೆದರಿಕೆ ಹಿನ್ನೆಲೆಯಲ್ಲಿ ವಿಷಯವನ್ನು ಬಹಿರಂಗಪಡಿಸಿರಲಿಲ್ಲ ಎನ್ನಲಾಗಿದೆ. ಸಾಕ್ಷ್ಯ ನಾಶಗೊಳಿಸಲು ಕಾರನ್ನು ಸ್ವಚ್ಛಗೊಳಿಸಿರುವುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮನ್ಹೇಂದ್ರ ಸಿಂಗ್ ಮೂಲತಃ ಜಲೌನ್ ಮೂಲದವರು. ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿಕಾಗಿದ್ದರು. ಪತ್ನಿ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಧಿವಿಜ್ಞಾನ ತನಿಖೆ ಪ್ರಾರಂಭಿಸಿದ್ದಾರೆ. ಪ್ರಕರಣವು ನಗರದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಪೊಲೀಸ್ ಇಲಾಖೆ ಹೆಚ್ಚಿನ ವಿಚಾರಣೆ ನಡೆಸುತ್ತಿದೆ.
BREAKING NEWS
Loading latest news...
Join our WhatsApp Channel Powered By : Online Pudu