ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಸುರತ್ಕಲ್ ನಲ್ಲಿ ಅಣ್ಣನಿಂದ ತಮ್ಮನ ಕೊಲೆ: ಕಲ್ಲು ಎತ್ತಿ ಹಾಕಿ ತಮ್ಮನ ತಲೆ ಜಜ್ಜಿದ ಸಹೋದರ !

 



ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್ನಲ್ಲಿ ಒಡಹುಟ್ಟಿದವರ ನಡುವಿನ ಜಗಳವೊಂದು ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ಚೊಕ್ಕಬೆಟ್ಟು ಮಠದ ಸಮೀಪವಿರುವ ಬಾಡಿಗೆ ಮನೆಯೊಂದರಲ್ಲಿ ರವಿವಾರ ತಡರಾತ್ರಿ ರಕ್ತಸಿಕ್ತ ಘಟನೆ ಸಂಭವಿಸಿದೆ. ಕೌಟುಂಬಿಕ ಕಲಹದ ಉನ್ಮಾದದಲ್ಲಿ ಅಣ್ಣನೇ ತನ್ನ ಸೋದರನ ತಲೆಗೆ ಕಲ್ಲು ಎತ್ತಿಹಾಕಿ ಪ್ರಾಣ ತೆಗೆದಿದ್ದಾನೆ. ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸುರತ್ಕಲ್ ಪೊಲೀಸರು ಹಂತಕನನ್ನು ಹೆಡೆಮುರಿ ಕಟ್ಟಿದ್ದು, ತಾನು ನಡೆಸಿದ ಘೋರ ಕೃತ್ಯವನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಮನೆಯಲ್ಲಿ ಇಬ್ಬರೇ ಇದ್ದಾಗ ನಡೆದ ದುರಂತ:

ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ತೆಗ್ಯಾಳು ಗ್ರಾಮದ ಮೂಲದವರಾದ ಮಲ್ಲಿಕಾರ್ಜುನ (20) ಕೊಲೆಯಾದ ದುರ್ದೈವಿ. ಈತನ ಒಡಹುಟ್ಟಿದ ಅಣ್ಣ ಸೋಮನಾಥ (21) ಕೊಲೆಗೈದ ಹಂತಕ. ಇವರಿಬ್ಬರು ಚೊಕ್ಕಬೆಟ್ಟು ಮಠದ ಸನಿಹದಲ್ಲಿರುವ ರೇಖಾ ಎಂಬುವವರ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇವರ ತಾಯಿ ಇತ್ತೀಚೆಗಷ್ಟೇ ಸ್ವಗ್ರಾಮ ಕೊಪ್ಪಳಕ್ಕೆ ತೆರಳಿದ್ದರಿಂದ, ಘಟನೆ ನಡೆದ ರಾತ್ರಿ ಮನೆಯಲ್ಲಿ ಸಹೋದರರಿಬ್ಬರು ಮಾತ್ರ ಇದ್ದರು.

ರಾತ್ರಿಯ ಜಗಳಕ್ಕೆ ನಿದ್ದೆಯಲ್ಲೇ ಬಿತ್ತು ಮರಣ ಶಾಸನ:

ರವಿವಾರ ರಾತ್ರಿ ಸಹೋದರರಿಬ್ಬರ ಮಧ್ಯೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿತ್ತು. ಜಗಳ ಮುಗಿದ ನಂತರ ಮಲ್ಲಿಕಾರ್ಜುನ ರೂಮಿನಲ್ಲಿ ಮಲಗಿದ್ದ. ಆದರೆ ತೀವ್ರ ಆಕ್ರೋಶಗೊಂಡಿದ್ದ ಸೋಮನಾಥ, ತಮ್ಮ ಗಾಢ ನಿದ್ದೆಯಲ್ಲಿದ್ದಾಗ ಭಾರಿ ಗಾತ್ರದ ಕಲ್ಲೊಂದನ್ನು ತಂದು ಆತನ ತಲೆಗೆ ಎತ್ತಿ ಹಾಕಿದ್ದಾನೆ. ಕಲ್ಲಿನ ಭೀಕರ ಏಟಿಗೆ ತಲೆಬುರುಡೆ ಒಡೆದು ತೀವ್ರ ರಕ್ತಸ್ರಾವದಿಂದ ಮಲ್ಲಿಕಾರ್ಜುನ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಏನೂ ತಿಳಿಯದಂತೆ ನಾಟಕವಾಡಿದ ಅಣ್ಣ!

ತಮ್ಮನನ್ನು ಕೊಂದ ಬಳಿಕ ಸೋಮನಾಥ ಯಾರ ಮೇಲೂ ಅನುಮಾನ ಬಾರದಂತೆ ಸಾರ್ವಜನಿಕರನ್ನು ನಂಬಿಸಲು ಯತ್ನಿಸಿದ್ದಾನೆ. ಸೋಮವಾರ ಬೆಳಿಗ್ಗೆ ಎದ್ದು ನೆರೆಹೊರೆಯವರ ಬಳಿ ತೆರಳಿ, "ನನ್ನ ತಮ್ಮ ಮಲಗಿದ ಜಾಗದಿಂದ ಏಳುತ್ತಲೇ ಇಲ್ಲ" ಎಂದು ಕಣ್ಣೀರು ಹಾಕಿದ್ದಾನೆ. ಇದರಿಂದ ಸಂಶಯಗೊಂಡ ಸ್ಥಳೀಯರು ತಕ್ಷಣ ಮನೆಯ ಮಾಲೀಕರಿಗೆ ತಿಳಿಸಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸ್ ಕಮಿಷನರ್ ಅವರ ಸ್ಪಷ್ಟನೆ:

ಘಟನೆಯ ಕುರಿತು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. "ಹತ್ಯೆ ಪ್ರಕರಣದ ಆರೋಪಿಯನ್ನು ತಕ್ಷಣವೇ ಠಾಣೆಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ರಾತ್ರಿಯ ಅವಧಿಯಲ್ಲಿ ಸಹೋದರರ ನಡುವೆ ಜಗಳ ನಡೆದಿತ್ತು. ತೀವ್ರ ಜಗಳದ ಬೆನ್ನಲ್ಲೇ ತಾನು ತಮ್ಮನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿರುವುದಾಗಿ ಆರೋಪಿ ಪೊಲೀಸರ ಮುಂದೆ ಮುಕ್ತವಾಗಿ ಒಪ್ಪಿಕೊಂಡಿದ್ದಾನೆ," ಎಂದು ಕಮಿಷನರ್ ಸ್ಪಷ್ಟಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಎಚ್. ಎಂ., ಪಣಂಬೂರು ಉಪ ವಿಭಾಗದ ಎಸಿಪಿ ಶ್ರೀಕಾಂತ್ ಹಾಗೂ ಸುರತ್ಕಲ್ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಶ್ವಾನ ದಳ, ಬೆರಳಚ್ಚು ತಜ್ಞರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ಅಧಿಕಾರಿಗಳು ಸ್ಥಳದಿಂದ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ.