ಬಂಟ್ವಾಳ:
ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಮಧ್ಯೆಯೇ ಬಂಟ್ವಾಳ ತಾಲೂಕಿನ ರಾಯಿ ಗ್ರಾಮದಲ್ಲಿ ದುರಂತವೊಂದು ಸಂಭವಿಸಿದೆ. ಪಾಂಚಕೋಡಿ ಎಂಬಲ್ಲಿ ಶನಿವಾರ ರಾತ್ರಿ ಕಾಲುಸಂಕ ದಾಟುತ್ತಿದ್ದ ವೇಳೆ ಕಾಲುಜಾರಿ ತೋಡಿಗೆ ಬಿದ್ದು ವ್ಯಕ್ತಿಯೊಬ್ಬರು ನೀರು ಪಾಲಾಗಿ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದವರನ್ನು ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೊ ಎಂಬವರ ಪುತ್ರ ಜೀವನ್ ಪಿಂಟೊ (48) ಎಂದು ಗುರುತಿಸಲಾಗಿದೆ.
ರಾತ್ರಿ ನಡೆದಿದ್ದೇನು?
ಆಗಸ್ಟ್ 1 ರಂದು ರಾತ್ರಿ ಸುಮಾರು 7:30 ರ ವೇಳೆಗೆ ಜೀವನ್ ಪಿಂಟೊ ಅವರು ತಮ್ಮ ಮನೆಯಿಂದ ಸಮೀಪದಲ್ಲೇ ಇರುವ ಮಾವನ ಮನೆಗೆ ಕಾಲ್ನಡಿಗೆಯಲ್ಲಿ ಹೊರಟಿದ್ದರು. ದಾರಿ ಮಧ್ಯೆ ಇದ್ದ ತೋಡಿನ ಕಾಲುಸಂಕವನ್ನು ದಾಟುವಾಗ ಆಕಸ್ಮಿಕವಾಗಿ ಕಾಲು ಜಾರಿ ರಭಸವಾಗಿ ಹರಿಯುತ್ತಿದ್ದ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ತೋಡಿನ ನೀರಿನಲ್ಲಿ ಜೀವನ್ ಪಿಂಟೊ ಅವರ ಟಾರ್ಚ್ ಮತ್ತು ಚಪ್ಪಲಿ ಪತ್ತೆಯಾಗಿದ್ದು, ಅವರು ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ಸಮಯದಲ್ಲಿ ವಿಪರೀತ ಮಳೆ ಹಾಗೂ ಕತ್ತಲಿದ್ದ ಕಾರಣ ತಕ್ಷಣಕ್ಕೆ ಪತ್ತೆ ಕಾರ್ಯಾಚರಣೆ ನಡೆಸಲು ಅಡಚಣೆಯಾಗಿತ್ತು.
ಸುದ್ದಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ಕಾಣೆಯಾದ ವ್ಯಕ್ತಿಗಾಗಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.