ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಮಂಗಳೂರು: ಕಾಲೇಜು ಜೂನಿಯರ್‌ಗಳ ಮೇಲೆ ಸೀನಿಯರ್‌ಗಳಿಂದ ಹಲ್ಲೆ; ರ‌್ಯಾಗಿಂಗ್ ಶಂಕೆ – ಪೊಲೀಸ್ ಕಮಿಷನರ್ ಸ್ಪಷ್ಟನೆ!

 



ಮಂಗಳೂರು: ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ಈಗ ರ್ಯಾಗಿಂಗ್ ಸ್ವರೂಪ ಪಡೆದುಕೊಂಡಿದ್ದು, ಸೀನಿಯರ್ ವಿದ್ಯಾರ್ಥಿಗಳ ಗುಂಪೊಂದು ಜೂನಿಯರ್‌ಗಳ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಗುಜ್ಜರಕೆರೆ ಬಳಿ ಸಂಭವಿಸಿದೆ.



 ಕಾಲೇಜಿನ ಪ್ರಥಮ ವರ್ಷದ ಇಬ್ಬರು ವಿದ್ಯಾರ್ಥಿಗಳು ಹಲ್ಲೆಗೊಳಗಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಚಿಕಿತ್ಸೆಗಾಗಿ ನಗರದ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಹಾ ಅಂಗಡಿ ಬಳಿ ನಡೆದಿತ್ತು ಗಲಾಟೆ: ಪ್ರಥಮ ವರ್ಷದ (1st Year) ಇಬ್ಬರು ವಿದ್ಯಾರ್ಥಿಗಳು ಗುಜ್ಜರಕೆರೆಯ ಚಹಾ ಅಂಗಡಿಯೊಂದರ ಬಳಿ ಇದ್ದಾಗ, ದ್ವಿತೀಯ ವರ್ಷದ (2nd Year) ಸುಮಾರು 4 ರಿಂದ 6 ಮಂದಿ ಹಿರಿಯ ವಿದ್ಯಾರ್ಥಿಗಳ ಗುಂಪು ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದೆ ಎನ್ನಲಾಗಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿಕೆ: ಘಟನೆ ಕುರಿತು ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು, "ಗುಜ್ಜರಕೆರೆ ಟೀ ಶಾಪ್ ಬಳಿ ಪ್ರಥಮ ವರ್ಷದ ಇಬ್ಬರು ವಿದ್ಯಾರ್ಥಿಗಳ ಮೇಲೆ 4 ರಿಂದ 6 ಮಂದಿ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವುದು ಕಂಡುಬಂದಿದೆ. ಮೊದಲ ನೋಟಕ್ಕೆ ಇದೊಂದು ರ್ಯಾಗಿಂಗ್‌ಗೆ ಸಂಬಂಧಿಸಿದ ಘಟನೆಯಂತೆ ತೋರುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಲಿದ್ದು, ಪೊಲೀಸರು ಸಮಗ್ರ ತನಿಖೆ ಕೈಗೊಳ್ಳಲಿದ್ದಾರೆ. ತನಿಖೆಯ ಬಳಿಕವೇ ಸಂಪೂರ್ಣ ಸತ್ಯಾಂಶ ತಿಳಿಯಲಿದೆ," ಎಂದು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.