ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಗದಗ: ಭಾವೈಕ್ಯತೆಯ ಬೆಳಕು; ಕಳೆದ 35 ವರ್ಷಗಳಿಂದ ಶ್ರದ್ಧಾ-ಭಕ್ತಿಯಿಂದ ಲಕ್ಷ್ಮಿ ಪೂಜೆ ಆಚರಿಸುತ್ತಿರುವ ಮುಸ್ಲಿಂ ಕುಟುಂಬ! Beacon of Communal Harmony: Muslim Family in Gadag Celebrates Lakshmi Puja for 35 Consecutive Years




ಗದಗ:

ಧರ್ಮ-ಜಾತಿಗಳ ಗಡಿ ಮೀರಿ ಹಬ್ಬಗಳನ್ನು ಆಚರಿಸುವ ಮೂಲಕ ಕೋಮು ಸೌಹಾರ್ದತೆಯ ಅಪರೂಪದ ಸಂದೇಶ ಸಾರುತ್ತಿರುವ ಮುಸ್ಲಿಂ ಕುಟುಂಬವೊಂದು ಕಳೆದ ಮೂರೂವರೆ ದಶಕಗಳಿಂದ (35 ವರ್ಷ) ದೀಪಾವಳಿ ಹಬ್ಬದಂದು ಶ್ರದ್ಧೆಯಿಂದ ಶ್ರೀ ಲಕ್ಷ್ಮಿ ದೇವಿಯನ್ನು ಪೂಜಿಸಿಕೊಂಡು ಬರುತ್ತಿರುವ ಹೃದಯಸ್ಪರ್ಶಿ ಘಟನೆ ಗದಗ ಜಿಲ್ಲೆಯ ಜಕ್ಕಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಜಕ್ಕಲಿ ಗ್ರಾಮದ ಬಸ್ ನಿಲ್ದಾಣದ ಸಮೀಪ ಸೈಕಲ್ ಪಂಕ್ಚರ್ ಮತ್ತು ರಿಪೇರಿ ಅಂಗಡಿ ಇಟ್ಟುಕೊಂಡಿರುವ ಕುತ್ಬುದ್ದೀನ್ ಗದಗ್ ಅವರ ಕುಟುಂಬವೇ ಈ ಭಾವೈಕ್ಯತೆಯ ಜೀವಂತ ಸಂಕೇತ.

ಅಂಗಡಿಯಲ್ಲಿ ಲಕ್ಷ್ಮಿ ಮೂರ್ತಿ ಪ್ರತಿಷ್ಠಾಪನೆ, ಬ್ರಾಹ್ಮಣ ಪುರೋಹಿತರಿಂದ ಪೂಜೆ:

ಪ್ರತೀ ವರ್ಷ ದೀಪಾವಳಿ ಹಬ್ಬಕ್ಕೆ ಎರಡು ದಿನಗಳ ಮುಂಚಿತವಾಗಿಯೇ ಕುತ್ಬುದ್ದೀನ್ ಕುಟುಂಬಸ್ಥರೆಲ್ಲರೂ ತಮ್ಮ ಸೈಕಲ್ ಅಂಗಡಿಯನ್ನು ಸ್ವಚ್ಛಗೊಳಿಸಿ, ಆಕರ್ಷಕ ದೀಪಗಳಿಂದ ಶೃಂಗಾರಗೊಳಿಸುತ್ತಾರೆ. ಹಬ್ಬದ ದಿನದಂದು ಅಂಗಡಿಯಲ್ಲಿ ವಿಧ್ಯುಕ್ತವಾಗಿ ಲಕ್ಷ್ಮಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ಹಿಂದೂ ಅರ್ಚಕರನ್ನು ಕರೆಸಿ, ವೇದ ಮಂತ್ರ ಘೋಷಗಳು ಹಾಗೂ ಮಹಾಮಂಗಳಾರತಿಯೊಂದಿಗೆ ಸಾಂಪ್ರದಾಯಿಕ ವಿಧಿ-ವಿಧಾನಗಳ ಪ್ರಕಾರ ಪೂಜೆ ನೆರವೇರಿಸಲಾಗುತ್ತದೆ. ಕುಟುಂಬದ ಎಲ್ಲಾ ಸದಸ್ಯರು ಅತ್ಯಂತ ಶ್ರದ್ಧೆಯಿಂದ ಈ ಪೂಜೆಯಲ್ಲಿ ಭಾಗವಹಿಸಿ, ತಮ್ಮ ಕುಟುಂಬದ ಪ್ರಗತಿ ಹಾಗೂ ಇಡೀ ಗ್ರಾಮದ ಜನರ ಕ್ಷೇಮಾಭಿವೃದ್ಧಿಗಾಗಿ ಪ್ರಾರ್ಥಿಸುತ್ತಾರೆ.

ಮನೆಯಲ್ಲೇ ತಯಾರಾಗುತ್ತೆ ದೀಪಾವಳಿಯ ಸಿಹಿ ಕಡುಬು:

ಪೂಜೆಯ ನಂತರ ಕುತ್ಬುದ್ದೀನ್ ಅವರ ಪತ್ನಿ ಮನೆಯಲ್ಲೇ ತಯಾರಿಸುವ ದೀಪಾವಳಿಯ ಸಾಂಪ್ರದಾಯಿಕ ಸಿಹಿ ತಿನಿಸಾದ ಕಡುಬು ಹಾಗೂ ಇತರ ತಿನಿಸುಗಳನ್ನು ನೆರೆಹೊರೆಯವರಿಗೆ ಹಂಚಿ ಸಂಭ್ರಮಿಸಲಾಗುತ್ತದೆ.

"ಆರಂಭದಲ್ಲಿ ಕೇವಲ 10 ಜನರಿದ್ದ ಈ ಆಚರಣೆ, ಇಂದು 50ಕ್ಕೂ ಹೆಚ್ಚು ಜನರು ಒಟ್ಟಿಗೆ ಸೇರುವ ಮಟ್ಟಿಗೆ ಬೆಳೆದಿದೆ. ನಾವೆಲ್ಲರೂ ಅನ್ಯೋನ್ಯವಾಗಿ ಒಂದೇ ಕುಟುಂಬದಂತೆ ಬದುಕುತ್ತಿದ್ದೇವೆ" ಎಂದು ಕುತ್ಬುದ್ದೀನ್ ಸಂತಸ ಹಂಚಿಕೊಂಡಿದ್ದಾರೆ.

"ನನ್ನ ಬದುಕಿಗೆ ಎಲ್ಲರೂ ಕಾರಣ" – ಕುತ್ಬುದ್ದೀನ್ ಸೌಹಾರ್ದ ಮಾತು:

ಎಲ್ಲಾ ಧರ್ಮಗಳ ಹಬ್ಬಗಳನ್ನು ಆಚರಿಸುವುದರಲ್ಲಿ ಹೆಸರಾಗಿರುವ ಕುತ್ಬುದ್ದೀನ್, "ನನ್ನ ಪುಟ್ಟ ಸೈಕಲ್ ಅಂಗಡಿಗೆ ಯಾವುದೇ ಜಾತಿ-ಧರ್ಮದ ಭೇದವಿಲ್ಲದೆ ಎಲ್ಲರೂ ಬರುತ್ತಾರೆ. ನನ್ನ ಉತ್ತಮ ಜೀವನಕ್ಕೆ ಎಲ್ಲಾ ಸಮುದಾಯದವರೂ ನೆರವಾಗಿದ್ದಾರೆ. ಹೀಗಾಗಿ ಎಲ್ಲ ಧರ್ಮಗಳ ದೇವರನ್ನು ಭಕ್ತಿಯಿಂದ ಪೂಜಿಸುವುದು ನನ್ನ ಕರ್ತವ್ಯ" ಎಂದು ವಿನಮ್ರವಾಗಿ ನುಡಿದಿದ್ದಾರೆ.

ಗಾಂಧಿ ಗ್ರಾಮಕ್ಕೆ ಸೌಹಾರ್ದತೆಯ ಹೆಮ್ಮೆ:

"ಕುತ್ಬುದ್ದೀನ್ ಅವರ ದೈನಂದಿನ ದುಡಿಮೆಯ ನಡುವೆಯೂ ಸತತ 35 ವರ್ಷಗಳಿಂದ ಲಕ್ಷ್ಮಿ ಪೂಜೆಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವುದು ನಿಜಕ್ಕೂ ಶ್ಲಾಘನೀಯ. ನಮ್ಮ ಊರನ್ನು 'ಗಾಂಧಿ ಗ್ರಾಮ' ಎಂದೇ ಕರೆಯಲಾಗುತ್ತದೆ. ಕುತ್ಬುದ್ದೀನ್ ಅವರಂತಹ ಸೌಹಾರ್ದ ಮನಸ್ಥಿತಿಯ ಜನರಿರುವುದರಿಂದಲೇ ನಮ್ಮ ಗ್ರಾಮದಲ್ಲಿ ಇದುವರೆಗೆ ಯಾವುದೇ ಕೋಮು ಸಂಘರ್ಷಗಳು ನಡೆದಿಲ್ಲ" ಎಂದು ಸ್ಥಳೀಯ ನಿವಾಸಿ ಸಂಗಮೇಶ್ ಮೆಣಸಗಿ ಹೆಮ್ಮೆಯಿಂದ ಸ್ಮರಿಸಿದ್ದಾರೆ.