ಜೈಪುರ: ಔಷಧಿ ತರಲೆಂದು ಪತಿಯನ್ನು ಬೈಕ್‌ನಲ್ಲಿ ಕರೆದೊಯ್ದು, ಪೂರ್ವಯೋಜಿತ ಸಂಚಿನಂತೆ ಜ್ಯೂಸ್‌ನಲ್ಲಿ ವಿಷ ಬೆರೆಸಿ ಕುಡಿಸಿ ಹತ್ಯೆಗೈದ 23 ವರ್ಷದ ಪತ್ನಿ ಹಾಗೂ ಆಕೆಯ ಸಹಚರನನ್ನು ಜೈಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕವಿತಾ ಮೀನಾ (23) ಹಾಗೂ ಆಕೆಯ ಸಹಚರ ಗಣೇಶ್ ಮೀನಾ (27) ಎಂದು ಗುರುತಿಸಲಾಗಿದ್ದು, ಹತ್ಯೆಯಾದ ಪತಿಯನ್ನು ಮಹೇಶ್ ಮೀನಾ ಎಂದು ಹೆಸರಿಸಲಾಗಿದೆ.
ಪೂರ್ವಯೋಜಿತ ಕೃತ್ಯದ ವಿವರ:
ಜೈಪುರ ಪಶ್ಚಿಮ ವಿಭಾಗದ ಡಿಸಿಪಿ ಪ್ರಶಾಂತ್ ಕಿರಣ್ ಅವರು ನೀಡಿದ ಮಾಹಿತಿ ಪ್ರಕಾರ, ಆಗಸ್ಟ್ 5ರಂದು ಕವಿತಾ ತನ್ನ ಪತಿ ಮಹೇಶ್ ಮೀನಾಗೆ "ಔಷಧಿ ತರಲು ಹೋಗೋಣ" ಎಂದು ನಂಬಿಸಿ ಬೈಕ್‌ನಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದಳು. ಆದರೆ ಆಸ್ಪತ್ರೆಗೆ ಹೋಗುವ ಬದಲು ಆತನನ್ನು ನೈನಾಥ್ ಧಾಮ್ ಕಡೆಗೆ ಕರೆದೊಯ್ದು, ಅಲ್ಲಿ ಮೊದಲೇ ಕಾಯುತ್ತಿದ್ದ ಸಹಚರ ಗಣೇಶ್ ಮೀನಾನನ್ನು ಭೇಟಿಯಾಗಿದ್ದಳು.
ಅಲ್ಲಿ ಇಬ್ಬರೂ ಸೇರಿ ಪೂರ್ವಯೋಜನೆಯಂತೆ ಜ್ಯೂಸ್‌ನಲ್ಲಿ ವಿಷ ಬೆರೆಸಿ ಮಹೇಶ್‌ಗೆ ಕುಡಿಸಿದ್ದಾರೆ. ಜ್ಯೂಸ್ ಕುಡಿದ ಕೆಲವೇ ಕ್ಷಣಗಳಲ್ಲಿ ಮಹೇಶ್‌ನ ಆರೋಗ್ಯ ತೀವ್ರವಾಗಿ ಹದಗೆಡಲಾರಂಭಿಸಿದೆ. ತಕ್ಷಣ ಕವಿತಾ ಆತನನ್ನು ಬೈಕ್‌ನಲ್ಲಿ ರೋಡ್ ನಂ. 14ಕ್ಕೆ ಕರೆತಂದು, ಪತಿಯ ಸಹೋದರನಿಗೆ ಫೋನ್ ಮಾಡಿ ಅಲ್ಲಿಗೆ ಬರುವಂತೆ ನಾಟಕವಾಡಿದ್ದಾಳೆ. ತಕ್ಷಣ ಕುಟುಂಬಸ್ಥರು ಮಹೇಶ್‌ನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ, ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಸಿಸಿಟಿವಿಯಿಂದ ಬಯಲಾಯ್ತು ರಹಸ್ಯ:
ಘಟನೆಯ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಮಾರ್ಗಮಧ್ಯದ ಸಿಸಿಟಿವಿ (CCTV) ಕ್ಯಾಮೆರಾ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಕವಿತಾ ಹಾಗೂ ಗಣೇಶ್ ಒಟ್ಟಿಗೆ ಸೇರಿ ಜ್ಯೂಸ್ ನೀಡಿದ ದೃಶ್ಯಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳು ಲಭ್ಯವಾಗಿವೆ. ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದ್ದು, ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
