ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಮಂಗಳೂರು ಎಂಆರ್‌ಪಿಎಲ್‌ನಲ್ಲಿ ಭೀಕರ ಸ್ಫೋಟ ದುರಂತ: ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕೇರ ಸಾವು, ಓರ್ವರಿಗೆ ಸುಟ್ಟ ಗಾಯ; ಜೋಕಟ್ಟೆಯಲ್ಲಿ ಜನಾಕ್ರೋಶ, ಏರ್‌ಪೋರ್ಟ್‌ನಲ್ಲಿ ತಪಾಸಣೆ! Major Explosion at Mangaluru MRPL: 1 Contract Worker Killed, 1 Suffers Burn Injuries, 8 Hurt; Public Outcry in Jokatte, Airport Infrastructure Safe




ಮಂಗಳೂರು:

ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಆವರಣದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭೀಕರ ಸ್ಫೋಟ ಮತ್ತು ಬೆಂಕಿ ಅವಘಡದಿಂದ ಕರಾವಳಿ ಬೆಚ್ಚಿಬಿದ್ದಿದೆ. ಎಂಆರ್‌ಪಿಎಲ್‌ನ ಸಿಎಚ್‌ಟಿ (CHT - Hydro Sulphur Treatment Unit) ಘಟಕದಲ್ಲಿ ಬಾಯ್ಲರ್/ಪ್ರೆಶರ್ ಉಪಕರಣ ಸ್ಫೋಟಗೊಂಡ ಪರಿಣಾಮ ಭಾರೀ ದುರಂತ ಸಂಭವಿಸಿದ್ದು, ಗುತ್ತಿಗೆ ಆಧಾರದಲ್ಲಿ ಕರ್ತವ್ಯದಲ್ಲಿದ್ದ ಮೂಲ್ಕಿ ಮೂಲದ ಯುವಕ ಕಾರ್ಬನ್ ರೂಪದಲ್ಲಿ ಸುಟ್ಟು ಕರಕಲಾಗಿ ಮೃತಪಟ್ಟಿದ್ದಾರೆ.

ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಈ ಸಾವು ಹಾಗೂ ಒಟ್ಟು ಸ್ಥಿತಿಗತಿಯನ್ನು ಅಧಿಕೃತವಾಗಿ ಖಚಿತಪಡಿಸಿದ್ದು, ದುರ್ಘಟನೆಯಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿರುವುದಲ್ಲದೆ, ಓರ್ವರಿಗೆ ಗಂಭೀರ ಸುಟ್ಟ ಗಾಯ ಹಾಗೂ ಎಂಟು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

ದುರಂತದ ವಿವರಗಳು ಹಾಗೂ ಸಾವು-ನೋನಿನ ಮಾಹಿತಿ:

  • ಮೃತ ದುರ್ದೈವಿ: ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮೂಲ್ಕಿ ಮೂಲದ ಮನೀಶ್ ಕರ್ಕೇರ (ಅಂದಾಜು 30 ವರ್ಷ) ಸ್ಫೋಟದ ತೀವ್ರತೆಗೆ ಸಿಲುಕಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

  • ಸುಟ್ಟ ಗಾಯ: ಘಟಕದ ಒಳಗಡೆ ಇದ್ದ ರಾಜೇಶ್ ಬ್ಯಾಪ್ಟಿಸ್ಟ್ ಎಂಬುವರಿಗೆ ಶೇ. 35ರಷ್ಟು ಸುಟ್ಟ ಗಾಯಗಳಾಗಿದ್ದು, ಅವರನ್ನು ಶ್ರೀನಿವಾಸ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ಸಣ್ಣಪುಟ್ಟ ಗಾಯಾಳುಗಳು: ಸ್ಫೋಟದ ರಭಸಕ್ಕೆ ಪಕ್ಕದ ಕಚೇರಿಯ ಫಾಲ್ಸ್ ಸೀಲಿಂಗ್ ಹಾಗೂ ಗಾಜುಗಳು ಮುರಿದುಬಿದ್ದು ಗಾಯಗೊಂಡ ಇತರ 8 ಮಂದಿ ಸಿಬ್ಬಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

  • ಕಂಪನಿಯ ಆಂತರಿಕ ಅಗ್ನಿಶಾಮಕ ದಳವು ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದೆ.

ಅರ್ಧ ಗಂಟೆ ಮುನ್ನ ಮುಗಿದಿದ್ದ ಶಿಫ್ಟ್ – ತಪ್ಪಿದ ಮತ್ತಷ್ಟು ಮಹಾದುರಂತ:

ಘಟನಾ ಸ್ಥಳಕ್ಕೆ ತೆರಳಿದ್ದ ಆಂಬುಲೆನ್ಸ್ ಚಾಲಕ ಹಾಗೂ ಸಮಾಜ ಸೇವಕ ಮಹಮ್ಮದ್ ಕಳವಾರು ಮಾತನಾಡಿ, "ಸ್ಫೋಟ ಸಂಭವಿಸಿದ ಬಾಯ್ಲರ್ ಘಟಕದ ಬಳಿ ಮಹಿಳಾ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ 11:30 ರಿಂದ 12:00 ಗಂಟೆಯ ಸುಮಾರಿಗೆ ಅವರ ಶಿಫ್ಟ್ ಮುಗಿದು ಎಲ್ಲರೂ ಹೊರಟಿದ್ದರು. ಶಿಫ್ಟ್ ಮುಗಿದ ಕೇವಲ ಅರ್ಧ ಗಂಟೆಯ ಅಂತರದಲ್ಲಿ ಈ ಅವಘಡ ಸಂಭವಿಸಿದೆ. ಒಂದು ವೇಳೆ ಸಿಬ್ಬಂದಿ ಕರ್ತವ್ಯದಲ್ಲಿರುವಾಗಲೇ ಇದು ನಡೆದಿದ್ದರೆ ಊಹಿಸಲೂ ಸಾಧ್ಯವಾಗದ ಭೀಕರ ಸಾವು-ನೋವು ಸಂಭವಿಸುತ್ತಿತ್ತು" ಎಂದು ದೈವಕೃಪೆಯಿಂದ ದೊಡ್ಡ ಅನಾಹುತ ತಪ್ಪಿದ್ದನ್ನು ಸ್ಮರಿಸಿದರು.

ಸ್ಥಳಕ್ಕೆ ಶಾಸಕ ಡಾ. ವೈ. ಭರತ್ ಶೆಟ್ಟಿ ಭೇಟಿ – ಕಂದಾಯ ಸಚಿವರೊಂದಿಗೆ ಚರ್ಚೆ:

ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, "ಬಾಯ್ಲರ್ ಅಥವಾ ಪ್ರೆಶರ್ ಉಪಕರಣ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ. ಮೃತರ ಕುಟುಂಬಕ್ಕೆ ಹಾಗೂ ಆಸ್ತಿಪಾಸ್ತಿ ಕಳೆದುಕೊಂಡ ಸ್ಥಳೀಯರಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಕಂದಾಯ ಸಚಿವರೊಂದಿಗೆ ದೂರವಾಣಿಯಲ್ಲಿ ಮಾತನಾಡಲಾಗಿದೆ" ಎಂದರು.

ಜೋಕಟ್ಟೆಯಲ್ಲಿ ನಡುಗಿದ ಮನೆ, ಶಾಲೆ: ರಸ್ತೆ ತಡೆದು ಸಾರ್ವಜನಿಕರ ಆಕ್ರೋಶ!

ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಎಂಆರ್‌ಪಿಎಲ್ ಕೂಗಳತೆಯ ದೂರದಲ್ಲಿರುವ ಜೋಕಟ್ಟೆ ಗ್ರಾಮ ಪಂಚಾಯತ್ ಕಚೇರಿ, ಗ್ರಂಥಾಲಯ, ಅಂಗನವಾಡಿ ಹಾಗೂ ಸುತ್ತಮುತ್ತಲಿನ ನೂರಾರು ಮನೆಗಳ ಕಿಟಕಿ ಗಾಜುಗಳು ಚೂರುಚೂರಾಗಿ ಬಿದ್ದಿವೆ. ಭೂಕಂಪನದ ರೀತಿಯಲ್ಲಿ ಶಬ್ದ ಹಾಗೂ ಕಂಪನ ಉಂಟಾಗಿ ಕಂಗಾಲಾದ ಸ್ಥಳೀಯರು, ಮುನೀರ್ ಕಾಟಿಪಳ್ಳ, ಗ್ರಾಮ ಪಂಚಾಯತ್ ಸದಸ್ಯ ಫಯಾಜ್, ಪರ್ವೇಜ್ ಅಲಿ ಹಾಗೂ ಮಾಜಿ ಸದಸ್ಯ ಪರ್ವೇಜ್ ಅಲಿ ನೇತೃತ್ವದಲ್ಲಿ ಎಂಆರ್‌ಪಿಎಲ್ ಮುಖ್ಯದ್ವಾರದ ಬಳಿ ಜಮಾಯಿಸಿ ರಸ್ತೆ ತಡೆದು ಭಾರಿ ಪ್ರತಿಭಟನೆ ನಡೆಸಿದರು. ನಿರಂತರ ಮಾಲಿನ್ಯ ಹಾಗೂ ಅಪಾಯದ ನೆರಳಿನಲ್ಲಿ ಬದುಕುತ್ತಿರುವ ತಮಗೆ ಶಾಶ್ವತ ಪರಿಹಾರ ನೀಡಿ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿದರು.

ಮಂಗಳೂರು ವಿಮಾನ ನಿಲ್ದಾಣದ ಮೂಲಸೌಕರ್ಯ ಸುರಕ್ಷಿತ:

ಸ್ಫೋಟದ ಸದ್ದು ಹಾಗೂ ಕಂಪನವು ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ತಟ್ಟಿತಾದರೂ, ಏರ್‌ಪೋರ್ಟ್‌ನ ಯಾವುದೇ ಮೂಲಸೌಕರ್ಯಕ್ಕೆ ಹಾನಿಯಾಗಿಲ್ಲ ಮತ್ತು ಗ್ಲಾಸ್‌ಗಳು ಒಡೆದಿಲ್ಲ ಎಂದು ವಿಮಾನ ನಿಲ್ದಾಣದ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಜಿಲ್ಲಾಡಳಿತದ ಸೂಚನೆಯಂತೆ CAT-1 ಲೈಟಿಂಗ್ ವ್ಯವಸ್ಥೆ ಮತ್ತು ರನ್‌ವೇ ಪರಿಧಿಯ ರಸ್ತೆಗಳನ್ನು ದೃಶ್ಯ ತಪಾಸಣೆ (Visual Inspection) ನಡೆಸಲಾಗಿದ್ದು, ವಿಮಾನ ಸಂಚಾರ ಎಂದಿನಂತೆ ಸುಗಮವಾಗಿ ಮುಂದುವರಿದಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಹಾಗೂ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು, ಸ್ಫೋಟಕ್ಕೆ ನಿಖರ ಕಾರಣ ಏನು ಎಂಬ ಬಗ್ಗೆ ಸಮಗ್ರ ತನಿಖೆ ಮುಂದುವರಿದಿದೆ.