ಫರಿದಾಬಾದ್ (ಹರಿಯಾಣ): ಹರಿಯಾಣದ ಫರಿದಾಬಾದ್ ಸಮೀಪದ ಸೀಹಿ ಗ್ರಾಮದಲ್ಲಿ ಭಾನುವಾರ ಸಂಜೆ ಮನಕಲಕುವ ಘಟನೆಯೊಂದು ನಡೆದಿದ್ದು, ಆಟವಾಡುತ್ತಿದ್ದ ಎರಡೂವರೆ ವರ್ಷದ ಹೆಣ್ಣು ಮಗುವೊಂದು ಸುಮಾರು 200 ಅಡಿ ಆಳದ ಪಾಳುಬಿದ್ದ ತೆರೆದ ಬೋರ್‌ವೆಲ್‌ಗೆ ಬಿದ್ದಿದೆ. ಮಗುವನ್ನು ಸುರಕ್ಷಿತವಾಗಿ ಹೊರತರಲು ರಕ್ಷಣಾ ತಂಡಗಳು ತೀವ್ರ ಕಾರ್ಯಾಚರಣೆ ನಡೆಸುತ್ತಿವೆ.
ಟ್ರ್ಯಾಕ್ಟರ್ ಮೇಲೆ ಆಟವಾಡುತ್ತಿದ್ದಾಗ ದುರಂತ:
ಸ್ಥಳೀಯ ಮೂಲಗಳ ಪ್ರಕಾರ, ಭಾನುವಾರ ಸಂಜೆ ಸುಮಾರು 7 ಗಂಟೆಯ ವೇಳೆಗೆ ಈ ಘಟನೆ ಸಂಭವಿಸಿದೆ. ಬೋರ್‌ವೆಲ್ ಬಳಿ ನಿಲ್ಲಿಸಲಾಗಿದ್ದ ಟ್ರ್ಯಾಕ್ಟರ್ ಮೇಲೆ ಹತ್ತಿ ಆಟವಾಡುತ್ತಿದ್ದ ಮಗು, ಆಯತಪ್ಪಿ ನೇರವಾಗಿ ತೆರೆದಿದ್ದ ಬೋರ್‌ವೆಲ್ ಗುಂಡಿಗೆ ಜಾರಿ ಬಿದ್ದಿದೆ.
ಈ ಬೋರ್‌ವೆಲ್ ಸ್ಥಳೀಯ ಪುರಸಭೆಗೆ ಸೇರಿದ್ದು, ಸುಮಾರು 10 ವರ್ಷಗಳಿಂದ ಯಾವುದೇ ಬಳಕೆಯಿಲ್ಲದೆ ಪಾಳುಬಿದ್ದಿತ್ತು ಎನ್ನಲಾಗಿದೆ. ಆದರೆ ಇತ್ತೀಚೆಗೆ ಯಾರೋ ಅದರ ಮೇಲಿದ್ದ ಮುಚ್ಚಳವನ್ನು ತೆಗೆದಿದ್ದರು ಎಂದು ತಿಳಿದುಬಂದಿದೆ. ಘಟನೆ ನಡೆದ ಸಂದರ್ಭದಲ್ಲಿ ಮಗುವಿನ ತಂದೆ ರಾಮ್‌ದಿನ್ ಅವರು ಕೆಲಸದಲ್ಲಿದ್ದು, ಗ್ರಾಮಸ್ಥರು ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಧಾವಿಸಿ ಮಗಳನ್ನು ರಕ್ಷಿಸುವಂತೆ ಕಣ್ಣೀರಿಡುತ್ತಿದ್ದಾರೆ.
ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ:
ವಿಷಯ ತಿಳಿಯುತ್ತಿದ್ದಂತೆ ಫರಿದಾಬಾದ್ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಜೆಸಿಬಿ ಯಂತ್ರಗಳ ನೆರವಿನಿಂದ ಬೋರ್‌ವೆಲ್ ಪಕ್ಕದಲ್ಲಿ ಮಣ್ಣು ತೆರವುಗೊಳಿಸುವ ಕಾರ್ಯವನ್ನು ಭರದಿಂದ ಆರಂಭಿಸಿದ್ದಾರೆ.
ಮಗು ಬೋರ್‌ವೆಲ್‌ನ ಎಷ್ಟು ಅಡಿ ಆಳದಲ್ಲಿ ಸಿಲುಕಿಕೊಂಡಿದೆ ಎಂಬುದನ್ನು ಕ್ಯಾಮೆರಾ ಹಾಗೂ ಸೆನ್ಸರ್‌ಗಳ ಮೂಲಕ ಪತ್ತೆಹಚ್ಚುವ ಪ್ರಯತ್ನಗಳು ಮುಂದುವರಿದಿದ್ದು, ಮಗುವಿಗೆ ಆಮ್ಲಜನಕ ಪೂರೈಸುವ ವ್ಯವಸ್ಥೆಯೊಂದಿಗೆ ರಕ್ಷಣಾ ಪಡೆಗಳು ಯುದ್ಧೋಪಾದಿಯಲ್ಲಿ ಶ್ರಮಿಸುತ್ತಿವೆ.