ಬಲರಾಮ್ಪುರ (ಉತ್ತರ ಪ್ರದೇಶ):
ಶಾಲೆಯ ತರಗತಿ ಕೋಣೆಯಲ್ಲಿದ್ದ ಎರಡನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಏಕಾಏಕಿ ಕುಸಿದುಬಿದ್ದು ಸಾವನ್ನಪ್ಪಿರುವ ಅತ್ಯಂತ ದಾರುಣ ಘಟನೆ ಉತ್ತರ ಪ್ರದೇಶದ ಬಲರಾಮ್ಪುರದಲ್ಲಿ ನಡೆದಿದೆ. ಶಾಲೆಯ ಸಮೀಪ ಸಾಗುತ್ತಿದ್ದ ವಿಸರ್ಜನಾ ಮೆರವಣಿಗೆಯ ಭೀಕರ ಡಿಜೆ (DJ) ಸದ್ದಿನಿಂದ ಉಂಟಾದ ಕಂಪನ ಮತ್ತು ಆಘಾತವೇ ಬಾಲಕಿಯ ಹೃದಯಾಘಾತ ಹಾಗೂ ಸಾವಿಗೆ ಕಾರಣ ಎಂದು ಆಕೆಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಸೋನು ತಿವಾರಿ ಎಂಬುವವರ ಪುತ್ರಿ ಮೃತ ದುರ್ದೈವಿ ಬಾಲಕಿ. ಬಾಲಕಿಯ ಸ್ಥಿತಿ ಕ್ಷೀಣಿಸುವ ಮುನ್ನ ಶಾಲಾ ತರಗತಿಯಲ್ಲಿ ನಡೆದ ಕ್ಷಣಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ತರಗತಿಯಲ್ಲಿ ಕುಳಿತಿದ್ದಾಗಲೇ ಕುಸಿದುಬಿದ್ದ ಬಾಲಕಿ:
ಬಲರಾಮ್ಪುರದ 'ಡಿವೈನ್ ಪಬ್ಲಿಕ್ ಸ್ಕೂಲ್'ನಲ್ಲಿ ಸೋಮವಾರ ಬೆಳಿಗ್ಗೆ ಸುಮಾರು 11 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಶಾಲಾ ಕಟ್ಟಡದ ಮೊದಲ ಮಹಡಿಯ ತರಗತಿ ಕೋಣೆಯಲ್ಲಿ ವಿದ್ಯಾರ್ಥಿನಿ ಪಾಠ ಕೇಳುತ್ತಾ ಕುಳಿತಿದ್ದಾಗ ಆಕೆಯ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದೆ.
ವೈರಲ್ ಆಗಿರುವ 3 ನಿಮಿಷ 2 ಸೆಕೆಂಡುಗಳ ಸಿಸಿಟಿವಿ ದೃಶ್ಯಾವಳಿಯಲ್ಲಿ, ತರಗತಿಯೊಳಗೆ ಮಕ್ಕಳು ಕುಳಿತಿರುವುದು ಹಾಗೂ ಹೊರಗಿನಿಂದ ಅತ್ಯಂತ ಭೀಕರವಾಗಿ ಡಿಜೆ ಸದ್ದು ಬರುತ್ತಿರುವುದು ಸ್ಪಷ್ಟವಾಗಿದೆ. ಶಬ್ದದ ತೀವ್ರತೆಗೆ ಹಲವು ಮಕ್ಕಳು ಕಿಟಕಿ ಹಾಗೂ ಬಾಗಿಲಿನತ್ತ ನೋಡುತ್ತಿರುವುದು ಕಂಡುಬಂದಿದೆ. ಇದರ ಬೆನ್ನಲ್ಲೇ ಬಾಲಕಿಯ ಆರೋಗ್ಯ ಗಂಭೀರ ಹಂತಕ್ಕೆ ತಲುಪಿದೆ. ಆಕೆಗೆ ಸತತ ಮೂರು ಬಾರಿ ಹೃದಯಾಘಾತ (Cardiac attack) ಸಂಭವಿಸಿದ್ದು, ಮೂರನೇ ಬಾರಿಗೆ ಸ್ಥಿತಿ ಸಂಪೂರ್ಣ ವಿಷಮಗೊಂಡು ಕೊನೆಯುಸಿರೆಳೆದಿದ್ದಾಳೆ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ.
ಶಾಲಾ ಮ್ಯಾನೇಜರ್ ಹೇಳಿಕೆ – ತನಿಖೆಗೆ ಆಗ್ರಹ:
ಡಿವೈನ್ ಪಬ್ಲಿಕ್ ಶಾಲೆಯ ಮ್ಯಾನೇಜರ್ ಆಶೀಶ್ ಉಪಾಧ್ಯಾಯ ಮಾತನಾಡಿ, "ಘಟನೆ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೆರವಣಿಗೆಯಲ್ಲಿ ಡಿಜೆ ಸದ್ದು ಅತಿಯಾದ ಡೆಸಿಬಲ್ನಲ್ಲಿ ಮೊಳಗುತ್ತಿತ್ತು ಎಂಬುದು ನಿಜ. ಇದು ಅತ್ಯಂತ ದುರದೃಷ್ಟಕರ ಘಟನೆ" ಎಂದು ತಿಳಿಸಿದ್ದಾರೆ.
ಮೆರವಣಿಗೆಗಳಲ್ಲಿ ನಿಗದಿಪಡಿಸಿದ ಶಬ್ದ ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿ ಕರ್ಕಶವಾಗಿ ಡಿಜೆ ಬಾರಿಸಲಾಗುತ್ತಿತ್ತೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ. ಬಾಲಕಿಯ ಸಾವಿಗೆ ನಿಖರ ವೈದ್ಯಕೀಯ ಕಾರಣವೇನು ಮತ್ತು ಡಿಜೆ ಸದ್ದಿನ ನೇರ ಪ್ರಭಾವವಿದೆಯೇ ಎಂಬ ಬಗ್ಗೆ ಮರಣೋತ್ತರ ಪರೀಕ್ಷಾ ವರದಿಯ ನಂತರ ಸ್ಪಷ್ಟತೆ ಸಿಗಬೇಕಿದೆ.
