ಬೆಳ್ಳಿತೆರೆ ವರದಿ:
ಶಾರುಖ್ ಖಾನ್ ಅವರ 'ಕಿಂಗ್ ಅಂಕಲ್', ಸಂಜಯ್ ದತ್ ಅವರ 'ಖಲ್‌ನಾಯಕ್', ಅಜಯ್ ದೇವಗನ್ ಅಭಿನಯದ 'ಗೋಲ್‌ಮಾಲ್ ರಿಟರ್ನ್ಸ್' ಹಾಗೂ ಪ್ರಿಯಾಂಕಾ ಚೋಪ್ರಾ ನಟನೆಯ 'ದೋಸ್ತಾನಾ' ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಬಾಲಿವುಡ್‌ನ ಹಿರಿಯ ನಟಿ ಸುಸ್ಮಿತಾ ಮುಖರ್ಜಿ, ತಮ್ಮ ಜೀವನದ ಅತ್ಯಂತ ಕಷ್ಟದ ಹಾಗೂ ಕರಾಳ ದಿನಗಳನ್ನು ಬಿಚ್ಚಿಟ್ಟಿದ್ದಾರೆ.
ತಮ್ಮದೇ ಪ್ರೊಡಕ್ಷನ್ ಹೌಸ್ ದಿವಾಳಿಯೆದ್ದು ಬರೋಬ್ಬರಿ ₹1 ಕೋಟಿ ರೂಪಾಯಿ ಸಾಲದ ಸುಳಿಗೆ ಸಿಲುಕಿದ್ದ ಕಾರಣ, ಅದನ್ನು ತೀರಿಸಲು ಕನಿಷ್ಠ ಮಟ್ಟದ 'ಸಿ-ಗ್ರೇಡ್' ಸಿನಿಮಾಗಳಲ್ಲಿ ನಟಿಸಬೇಕಾಯಿತು ಎಂದು ಅವರು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ವಿಡಿಯೋದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.
"ನನ್ನ ಆತ್ಮವನ್ನೇ ಮಾರಿ ನಟಿಸಿದೆ, ಅದು ನನ್ನ ಅಸಹಾಯಕತೆ!"
ವಿಡಿಯೋದಲ್ಲಿ ಹಳೆಯ ದಿನಗಳನ್ನು ನೆನಪಿಸಿಕೊಂಡು ಭಾವುಕರಾದ ಸುಸ್ಮಿತಾ, "ಹಲವರು ನನ್ನ ಬಳಿ 'ಮೇಡಂ, ನೀವು ಯಾಕೆ ಅಷ್ಟೊಂದು ಕೆಟ್ಟ ಹಾಗೂ ಮಹಿಳೆಯರನ್ನು ಕೀಳಾಗಿ ಕಾಣುವ ಲೈಂಗಿಕ ಪ್ರಚೋದಕ (Sexist), ಸಿ-ಗ್ರೇಡ್ ಸಿನಿಮಾಗಳಲ್ಲಿ ನಟಿಸಿದ್ರಿ?' ಎಂದು ಕೇಳುತ್ತಾರೆ. ಅವರ ಪ್ರಶ್ನೆ ಕೇಳಿ ನನಗೆ ಆಘಾತವಾಗಿತ್ತು, ಏಕೆಂದರೆ ಆ ದಿನಗಳನ್ನು ನೆನಪಿಸಿಕೊಳ್ಳುವುದು ನನಗೆ ನಿಜಕ್ಕೂ ತೀವ್ರ ಮುಜುಗರ ಹಾಗೂ ಕಿರಿಕಿರಿ ಉಂಟುಮಾಡುತ್ತದೆ. ಆದರೆ ನಾನು ನೀಲಿಚಿತ್ರಗಳಲ್ಲಿ (Pornography) ನಟಿಸಲಿಲ್ಲ. ನನ್ನ ಹೊಟ್ಟೆಪಾಡಿಗಾಗಿ ಕೆಟ್ಟ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಯಿತು. ಹೌದು, ಆ ಸಿನಿಮಾಗಳಿಗಾಗಿ ನಾನು ನನ್ನ ಆತ್ಮವನ್ನೇ ಮಾರಿಕೊಂಡಿದ್ದೆ! ಆ ರೀತಿ ನಟಿಸಿದ್ದು ನನಗಾಗಲೀ, ಈಗಾಗಲೀ ಹೆಮ್ಮೆ ತಂದಿಲ್ಲ, ಆದರೆ ಅದು ನನ್ನ ಅಸಹಾಯಕತೆಯಾಗಿತ್ತು," ಎಂದು ಬರೆದುಕೊಂಡಿದ್ದಾರೆ.
1 ಕೋಟಿ ಸಾಲ, ಮನೆ ಬಾಗಿಲಿಗೆ ಬಂದು ನಿಂದಿಸುತ್ತಿದ್ದ ರಿಕವರಿ ಏಜೆಂಟರು!
ತಮ್ಮ ಕಂಪನಿ ದಿವಾಳಿಯಾದ ಕಥೆಯನ್ನು ವಿವರಿಸಿದ ಅವರು, "2002ರಲ್ಲಿ ನಾವ ಹೊಸ ತಂತ್ರಜ್ಞಾನ ಹಾಗೂ ಏಂಜೆಲ್ ಇನ್ವೆಸ್ಟ್‌ಮೆಂಟ್ ಬಗ್ಗೆ ಅರಿವಿಲ್ಲದೆ ಸಾಲ ಮಾಡಿ 'ಪ್ರಯಾಸ್ ಪ್ರೊಡಕ್ಷನ್' (Prayas Production) ಎಂಬ ಮೀಡಿಯಾ ಕಂಪನಿ ಆರಂಭಿಸಿದ್ದೆವು. ಆದರೆ ಅನುಭವದ ಕೊರತೆಯಿಂದಾಗಿ ಬರೋಬ್ಬರಿ ₹1 ಕೋಟಿ ನಷ್ಟವಾಗಿ ಕಂಪನಿ ಸಂಪೂರ್ಣ ದಿವಾಳಿಯಾಯಿತು. ಸಾಲ ನೀಡಿದವರು ಹಾಗೂ ರಿಕವರಿ ಏಜೆಂಟರು ದಿನವೂ ಮನೆ ಬಾಗಿಲಿಗೆ ಬಂದು ನಮ್ಮನ್ನು ಕೆಟ್ಟದಾಗಿ ನಿಂದಿಸುತ್ತಿದ್ದರು. ಆ ಸಮಯದಲ್ಲಿ ನನ್ನ ಮಕ್ಕಳು ತೀರಾ ಸಣ್ಣವರಾಗಿದ್ದರು. ಸಾಲ ತೀರಿಸಲೇಬೇಕಾದ ಅನಿವಾರ್ಯತೆಯಿಂದಾಗಿ ಸಿಕ್ಕ ಸಿಕ್ಕ ಸಿನಿಮಾಗಳಲ್ಲಿ ನಟಿಸಲು ಶೂರು ಮಾಡಿದೆ. ನಾನು ಮತ್ತು ನನ್ನ ಪತಿ ಹಗಲು-ರಾತ್ರಿ ಕಷ್ಟಪಟ್ಟು 3-4 ವರ್ಷಗಳಲ್ಲಿ ಆ ₹1 ಕೋಟಿ ಸಾಲವನ್ನು ತೀರಿಸಿದೆವು," ಎಂದಿದ್ದಾರೆ.
ಮಕ್ಕಳ ವಿದೇಶಿ ಶಿಕ್ಷಣಕ್ಕೂ ಹಣ ಬೇಕಿತ್ತು!
ಸಾಲದ ಜೊತೆಗೆ ಮಗಳನ್ನು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ದುಬಾರಿ ವೆಚ್ಚದಲ್ಲಿ ಓದಿಸಬೇಕಿದ್ದ ಕಾರಣದಿಂದಾಗಿಯೂ ತಾವು ಆ ರೀತಿಯ ಚಿತ್ರರಂಗದ ಆಯ್ಕೆಗಳನ್ನು ಮಾಡಿಕೊಳ್ಳಬೇಕಾಯಿತು ಎಂದು ಅವರು ತಿಳಿಸಿದ್ದಾರೆ.
"ಪ್ರತಿಯೊಬ್ಬ ವ್ಯಕ್ತಿಯೂ ತಾನು ಯಾಕೆ ಹಣ ಸಂಪಾದಿಸುತ್ತಿದ್ದೇನೆ ಎಂಬುದರ ಸ್ಪಷ್ಟತೆ ಹೊಂದಿರಬೇಕು. ಜೀವನದ ಅಸಹಾಯಕತೆ, ಹೊಟ್ಟೆಪಾಡು ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ನಾನು ಆ ನಿರ್ಧಾರಗಳನ್ನು ತೆಗೆದುಕೊಂಡೆ. ಆ ಪ್ರಾಜೆಕ್ಟ್‌ಗಳ ಬಗ್ಗೆ ನನಗೇನೂ ಹೆಮ್ಮೆಯಿಲ್ಲ, ಆದರೆ ಆ ಸಮಯಕ್ಕೆ ಅದು ಸರಿಯಾಗಿತ್ತು," ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಕಷ್ಟದ ದಿನಗಳಿಂದ ಹೊರಬಂದಿರುವ ಸುಸ್ಮಿತಾ ಮುಖರ್ಜಿ, ಈಗ ತಮ್ಮ ಮನಸ್ಸಿಗೆ ಒಪ್ಪುವ ಹಾಗೂ ಆತ್ಮಕ್ಕೆ ತೃಪ್ತಿ ಕೊಡುವ ಒಳ್ಳೆಯ ಪ್ರಾಜೆಕ್ಟ್‌ಗಳಲ್ಲಿ ಮಾತ್ರ ಅಭಿನಯಿಸುತ್ತಿರುವುದಾಗಿ ಹೇಳಿದ್ದಾರೆ.
