ಆಪ್ತ ಸ್ನೇಹಿತನ ಮಗಳ ಮೇಲೆ ಅಧಿಕಾರಿಯಿಂದ ಲೈಂಗಿಕ ದೌರ್ಜನ್ಯ
Monday, August 21, 2023
ಹೊಸದಿಲ್ಲಿ: ದಿಲ್ಲಿಯ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದ ಆಪ್ತ ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿ ಅಧಿಕಾರಿ ವಿರುದ್ಧ ದಿಲ್ಲಿ ಪೊಲೀಸರು, ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ. ಕೃತ್ಯ ಮರೆಮಾಚಲು ಯತ್ನಿಸಿದ ಅಧಿಕಾರಿಯ ಪತ್ನಿಯ ವಿರುದ್ಧವೂ ಪ್ರಕರಣ ದಾಖಲು ಮಾಡಿದ್ದಾರೆ.
2020ರಲ್ಲಿ ತಂದೆಯನ್ನು ಕಳೆದುಕೊಂಡಿದ್ದ ಸಂತ್ರಸ್ತೆ ತಾಯಿ ಜತೆ ವಾಸವಿದ್ದರು. ಈ ವೇಳೆ ಮನೆಗೆ ಬಂದಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ತಾನು ಬಾಲಕಿಯ ಶೈಕ್ಷಣಿಕ ಜವಾಬ್ದಾರಿ ಹೊಣೆ ಹೊರುವುದಾಗಿ ಹೇಳಿ ಮನೆಗೆ ಕರೆದುಕೊಂಡು ಬಂದಿದ್ದ. ಉತ್ತರ ದಿಲ್ಲಿಯಲ್ಲಿ ಪತ್ನಿ ಹಾಗೂ ಮಗನೊಂದಿಗೆ ವಾಸಿಸುತ್ತಿದ್ದ ಅಧಿಕಾರಿ, ಒಂದು ವರ್ಷದ ಕಾಲ ಅಪ್ರಾಪ್ತೆಯನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾನೆ.
ಗರ್ಭವತಿಯಾದ ಸಂತ್ರಸ್ತೆಗೆ ಅಧಿಕಾರಿಯ ಪತ್ನಿ ಗರ್ಭಪಾತ ಮಾತ್ರೆ ನೀಡಿದ್ದಳು ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.