ಜಗಳದ ಬಳಿಕ ಯುವ ದಂಪತಿ ಆತ್ಮಹತ್ಯೆಗೆ ಶರಣು: ಸಾವಿಗೂ ಮುನ್ನ ಪುಟ್ಟ ಮಗುವಿನ ಕತ್ತು ಹಿಸುಕಿ ಕೊಲೆಗೈಯ್ಯಲು ಯತ್ನ, ಪ್ರಜ್ಞೆ ತಪ್ಪಿ ಶಿಶು ಬಚಾವ್



ಮಂಡ್ಯ: ತಮ್ಮದೇ ಮಗುವಿನ ಹತ್ಯೆಗೆ ಯತ್ನಿಸಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕೆ.ಆ‌ರ್.ಪೇಟೆ ಪಟ್ಟಣದಲ್ಲಿ ನಡೆದಿದೆ. 

ಹೊಸಕೋಟೆ ಗ್ರಾಮದ ನಿವಾಸಿ ದರ್ಶನ್ (29) ಮತ್ತು ಪತ್ನಿ ದಿವ್ಯಶ್ರೀ (25) ಮೃತಪಟ್ಟವರು.

ಮೃತಪಟ್ಟ ದರ್ಶನ್ - ದಿವ್ಯಶ್ರೀ ದಂಪತಿ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಎರಡು ವರ್ಷದ ಮಗುವಿತ್ತು. ಕೆ.ಆರ್. ಪೇಟೆಯ ಜಯನಗರ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದರು. ಸೋಮವಾರ ಬೆಳಗ್ಗೆ ಇವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ. ಆದರೆ, ಅಸ್ವಸ್ಥಗೊಂಡ ಮಗು ಬದುಕುಳಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ದರ್ಶನ್ ಕಾರು ಚಾಲಕನಾಗಿದ್ದು, ದಿವ್ಯಶ್ರೀ ಪ್ಯಾರಾ ಮೆಡಿಕಲ್‌ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಕಾರು ಚಾಲಕನಾಗಿದ್ದ ದರ್ಶನ್ ಡ್ರೈವಿಂಗ್ ಜೊತೆಗೆ ಕೃಷಿಯನ್ನೂ ಮಾಡುತ್ತಿದ್ದ. ಅದೇನು ಕಾರಣವೋ ತಿಳಿದಿಲ್ಲ ದಂಪತಿ ನಡುವೆ ಸೋಮವಾರ ಬೆಳಗ್ಗೆ ಜಗಳ ನಡೆದಿದೆ. ಗಲಾಟೆ ಬಳಿಕ ಮೊದಲು ನೇಣು ಬಿಗಿದುಕೊಂಡು ದಿವ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಪತ್ನಿ ಆತ್ಮಹತ್ಯೆ ಬಳಿಕ ಪತಿ ದರ್ಶನ್, ದಿವ್ಯಾ ಕುಟುಂಬಕ್ಕೆ ವಿಡಿಯೋ ಕಾಲ್ ಮಾಡಿ ತಾನು ಕೂಡ ಆತ್ಮಹತ್ಯೆಗೆ ಶರಣಾಗುತ್ತೇನೆ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ. ಪತ್ನಿ ಸಾವಿನ ಬಳಿಕ ಪುತ್ರಿಯನ್ನು ಕೂಡ ಕೊಲೆಗೈಯಲು ದರ್ಶನ್ ಮುಂದಾಗಿದ್ದಾನೆ. ಕತ್ತು ಹಿಸುಕಿದ ವೇಳೆ ಮಗು ಪ್ರಜ್ಞೆ ತಪ್ಪಿದ್ದು, ಸತ್ತಿದೆ ಎಂದು ತಿಳಿದು ದರ್ಶನ್ ನೇಣಿಗೆ ಶರಣಾಗಿದ್ದಾನೆ. ಆದರೆ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಕೆ.ಆ‌ರ್.ಪೇಟೆ ಟೌನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu