ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಆಂಧ್ರಪ್ರದೇಶದಲ್ಲಿ ಘೋರ ಕೃತ್ಯ: ದೇವಸ್ಥಾನದ ನೆಪದಲ್ಲಿ ಕರೆದೊಯ್ದು ಪತಿಯನ್ನೇ ಹತ್ಯೆಗೈದ ಪತ್ನಿ; ಪ್ರಿಯಕರ ಹಾಗೂ ಸಾಥಿಗಳಿಂದ ಬರ್ಬರ ಕೊಲೆ!

 


ಚಿತ್ತೂರು (ಆಂಧ್ರಪ್ರದೇಶ): ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದನೆಂಬ ಕಾರಣಕ್ಕೆ ಹೆಂಡತಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಭೀಕರ ಘಟನೆಯೊಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಗುಡುಪಲ್ಲೆ ಮಂಡಲದ ವ್ಯಾಪ್ತಿಯಲ್ಲಿ ಈ ರಕ್ತಸಿಕ್ತ ಕೃತ್ಯ ನಡೆದಿದ್ದು, ಪೂಜೆಯ ನೆಪದಲ್ಲಿ ಪತಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಸಂಚು ರೂಪಿಸಿ ಹತ್ಯೆ ಮಾಡಲಾಗಿದೆ.


ಪ್ರಕರಣದ ಸತ್ಯಾಸತ್ಯತೆಗಳ ಕುರಿತು ಕುಪ್ಪಂ ಡಿಎಸ್​ಪಿ ಪಾರ್ಥಸಾರಥಿ ಅವರು ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ತಮಿಳುನಾಡಿನ ಸುಳಗಿರಿ ಸಮೀಪದ ದೇವಾಸನಪಲ್ಲೆ ನಿವಾಸಿಯಾಗಿದ್ದ ರಮೇಶ್ ಕೊಲೆಯಾದ ದುರ್ದೈವಿ. ಇವರು ಹೊಸೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಎರಡು ವರ್ಷಗಳ ಹಿಂದೆ ಕುಪ್ಪಂ ಮೂಲದ ಹಸಿನಿ ಎಂಬಾಕೆಯನ್ನು ಮದುವೆಯಾಗಿದ್ದು, ಈ ದಂಪತಿಗೆ ಒಂದು ವರ್ಷದ ಹೆಣ್ಣು ಮಗುವಿದೆ.

ಮೊಬೈಲ್ ಕೆಳಗೆ ಬಿಸಾಡಿ ಸ್ಕೆಚ್ ಹಾಕಿದ ಕಿರಾತಕಿ:

ಆರೋಪಿ ಹಸಿನಿ ತನ್ನ ಪತಿ ರಮೇಶ್ ಹಾಗೂ ಮಗುವಿನೊಂದಿಗೆ ದ್ವಿಚಕ್ರ ವಾಹನದಲ್ಲಿ ಮಲ್ಲಪ್ಪ ಕೊಂಡ ದೇವಸ್ಥಾನಕ್ಕೆ ಪ್ರವಾಸ ಹೊರಟಿದ್ದಳು. ಈ ವೇಳೆ ಮುಂಚಿತವಾಗಿ ರೂಪಿಸಿದ್ದ ಸ್ಕೆಚ್ ಪ್ರಕಾರ, ಘಾಟ್ ರಸ್ತೆಯ ಮೂರನೇ ತಿರುವಿನ ಬಳಿ ತಲುಪುತ್ತಿದ್ದಂತೆ ತನ್ನ ಫೋನ್ ಕೆಳಗೆ ಬಿದ್ದಿದೆ ಎಂದು ಪತಿಗೆ ಸುಳ್ಳು ಹೇಳಿ ಬೈಕ್ ನಿಲ್ಲಿಸುವಂತೆ ಮಾಡಿದ್ದಾಳೆ.

ರಮೇಶ್ ಬೈಕ್ ನಿಲ್ಲಿಸುತ್ತಿದ್ದಂತೆಯೇ, ಅಲ್ಲಿಗೆ ಆಕೆಯ ಪ್ರಿಯಕರ ತನ್ನಿಬ್ಬರು ಸಹಚರರೊಂದಿಗೆ ಮಾರಕಾಸ್ತ್ರಗಳನ್ನು ಹಿಡಿದು ಧಾವಿಸಿದ್ದಾನೆ. ತಕ್ಷಣ ರಮೇಶ್‌ನನ್ನು ರಸ್ತೆ ಪಕ್ಕದ ಪೊದೆಗಳಿಗೆ ಎಳೆದುಕೊಂಡು ಹೋಗಿ ಚಾಕುವಿನಿಂದ ಮನಬಂದಂತೆ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಹತ್ಯೆಯ ಬಳಿಕ ಯಾವುದೇ ತಾಂತ್ರಿಕ ಹಾಗೂ ಭೌತಿಕ ಸಾಕ್ಷ್ಯಗಳು ಸಿಗಬಾರದು ಎಂಬ ಉದ್ದೇಶದಿಂದ ಆರೋಪಿಗಳು ತಾವು ಧರಿಸಿದ್ದ ಕೈಗವಸು ಹಾಗೂ ರಕ್ತಸಿಕ್ತ ಬಟ್ಟೆಗಳಿಗೆ ಸ್ಥಳದಲ್ಲೇ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.

ಅನುಮಾನ ತರಿಸಿದ ಬೈಕ್ ಸವಾರಿ - ಆರೋಪಿಗಳ ಬಂಧನ:

ಘಟನೆ ನಡೆದ ಬಳಿಕ ಹಸಿನಿಯ ತಾಯಿ ರುಕ್ಮಿಣಮ್ಮ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ರಮೇಶ್ ತಂದಿದ್ದ ಬೈಕ್‌ನಲ್ಲೇ ಹಸಿನಿ ಮತ್ತು ಇತರ ಇಬ್ಬರು ಯುವಕರು ಘಟನಾ ಸ್ಥಳದಿಂದ ಹಿಂತಿರುಗುತ್ತಿರುವುದನ್ನು ಗಮನಿಸಿದ ಪೊಲೀಸರಿಗೆ ಭಾರಿ ಅನುಮಾನ ಮೂಡಿತ್ತು.

ಈ ಸುಳಿವು ಬೆನ್ನತ್ತಿದ ಭದ್ರತಾ ಪಡೆಗಳು ಅರಣ್ಯ ಪ್ರದೇಶದಲ್ಲಿ ತೀವ್ರ ಶೋಧ ನಡೆಸಿದಾಗ ಮಲ್ಲಪ್ಪಕೊಂಡ ಘಾಟ್ ರಸ್ತೆಯ ಬಳಿ ರಮೇಶ್ ಅವರ ಮೃತದೇಹ ಪತ್ತೆಯಾಗಿದೆ. ಪತ್ನಿ ಹಸಿನಿ ಹಾಗೂ ಆಕೆಯ ಪ್ರಿಯಕರ ಸೇರಿ ಈ ಕೃತ್ಯ ಎಸಗಿರುವುದನ್ನು ಪ್ರಾಥಮಿಕ ತನಿಖೆಯಲ್ಲಿ ಖಚಿತಪಡಿಸಿಕೊಂಡಿರುವ ಪೊಲೀಸರು, ಸದ್ಯ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.