ಅಮೆರಿಕದಲ್ಲಿರುವ ಭಾರತ ಮೂಲದ ಟೆಕ್ಕಿ ಅವಿನಾಶ್ ನಾರ್ನೆ ಎಂಬಾತ ಪತ್ನಿ ರಾಜಿತಾ ಸಬ್ಬಿನೇನಿರನ್ನು ಕೊಂದು ಮೃತದೇಹದ ಫೋಟೋವನ್ನು ಭಾರತದಲ್ಲಿರುವ ಪ್ರೇಯಸಿಗೆ ವಾಟ್ಸ್ಆ್ಯಪ್ ಮಾಡಿ ಸಿಕ್ಕಿಬಿದ್ದಿದ್ದಾನೆ. ಆರಂಭದಲ್ಲಿ ಆತ್ಮಹತ್ಯೆಯೆಂದು ಬಿಂಬಿಸಲು ಯತ್ನಿಸಿದ್ದ, ಆದರೆ 9 ತಿಂಗಳ ತನಿಖೆಯ ಬಳಿಕ ಇದೀಗ ಆತ ಬಂಧಿತನಾಗಿದ್ದಾನೆ. ಪತ್ನಿಯ ಪಾನೀಯದಲ್ಲಿ ವಿಷ ಬೆರೆಸಿದ್ದ ಶಂಕೆಯೂ ಇದೆ. ಈ ಕರಾಳ ಕೃತ್ಯಕ್ಕೆ ಆತನಿಗೆ ಜೀವಾವಧಿ ಶಿಕ್ಷೆ ಎದುರಾಗುವ ಸಾಧ್ಯತೆಯಿದೆ.
ಭಾರತ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಅವಿನಾಶ್ ನಾರ್ನೆ (30) ಪತ್ನಿ ರಾಜಿತಾ ಸಬ್ಬಿನೇನಿ(27) ಎಂಬವರನ್ನು ಕೊಲೆಗೈದಿರುವುದು ತನಿಖೆಯಿಂದ ದೃಢಪಟ್ಟಿದೆ.
ಕಳೆದ ಅಕ್ಟೋಬರ್ನಲ್ಲಿ ಈ ಕೊಲೆ ನಡೆದಿತ್ತು. ಬಳಿಕ ಟೆಕ್ಕಿ ಇದನ್ನು ಆತ್ಮಹತ್ಯೆ ಅಥವಾ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಾನೆ. ಆದರೆ ಸುದೀರ್ಘ 9 ತಿಂಗಳ ತನಿಖೆಯ ಬಳಿಕ ಅಮೆರಿಕ ಪೊಲೀಸರು ಅವಿನಾಶ್ ನಾರ್ನೆಯ ಅಸಲಿ ಮುಖವಾಡ ಬಯಲು ಮಾಡಿ ಜುಲೈ 5 ರಂದು ಕೊಲೆ ಆರೋಪದಡಿ ಬಂಧಿಸಿದ್ದಾರೆ.
2025ರ ಅ.27ರಂದು ಅವಿನಾಶ್ ಪೊಲೀಸರಿಗೆ ಕರೆ ಮಾಡಿ, ತನ್ನ ಪತ್ನಿ ಬಾತ್ರೂಮ್ಗೆ ಹೋಗಿ ಲಾಕ್ ಮಾಡಿಕೊಂಡಿದ್ದಾಳೆ. ಎಷ್ಟು ಕರೆದರೂ ಹೊರಗೆ ಬರುತ್ತಿಲ್ಲ ಎಂದು ನಾಟಕವಾಡಿದ್ದಾನೆ. ಪೊಲೀಸರು ಬಂದು ಬಾಗಿಲು ಮುರಿದು ನೋಡಿದಾಗ ರಾಜಿತಾ ಮೃತದೇಹವಾಗಿ ಬಿದ್ದಿದ್ದರು.
ತಾನು ಹೊರಗೆ ಹೋಗಿ 40 ನಿಮಿಷಗಳಲ್ಲಿ ವಾಪಸ್ ಮನೆಗೆ ಬರುವಷ್ಟರಲ್ಲಿ ಈ ಘಟನೆ ನಡೆದಿದೆ ಎಂದು ಅವಿನಾಶ್ ಕಥೆ ಕಟ್ಟಿದ್ದಾನೆ. ಆದರೆ ಅಪಾರ್ಟ್ಮೆಂಟ್ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಆ ಸಮಯದಲ್ಲಿ ಮನೆಯೊಳಗೆ ಬೇರೆ ಯಾರೂ ಪ್ರವೇಶಿಸಿರಲಿಲ್ಲ ಎಂಬುದು ಸಾಬೀತಾಗಿದೆ. ಮರುದಿನ ವೈದ್ಯಕೀಯ ಪರೀಕ್ಷೆಯಲ್ಲಿ ರಾಜಿತಾ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ವರದಿಯಲ್ಲಿ ಬಂದಿತ್ತು. ಆಗ ಅನುಮಾನ ಪತಿ ಅವಿನಾಶ್ ಮೇಲೆ ತಿರುಗಿತ್ತು.
ತನಿಖೆ ಮುಂದುವರೆದಂತೆ ಅವಿನಾಶ್ನ ಕೆಲವೊಂದು ರಹಸ್ಯಗಳು ಹೊರಬಂದವು. ಅವಿನಾಶ್ ಭಾರತದಲ್ಲಿನ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು. ಅವಿನಾಶ್ ಜೂನ್ 5, 2025ರಂದು ರಾಜಿತಾ ಅವರನ್ನು ವಿವಾಹವಾಗಿದ್ದ. ಆಘಾತಕಾರಿ ವಿಷಯವೆಂದರೆ, ಈ ಮದುವೆಗೆ ಅವಿನಾಶ್ನ ಆ ರಹಸ್ಯ ಗೆಳತಿಯೂ ಬಂದಿದ್ದಳು.
ಮದುವೆಯಾಗಿ ಅಮೆರಿಕಕ್ಕೆ ಬಂದ ಮೇಲೂ ಅವಿನಾಶ್ ತನ್ನ ಪ್ರೇಯಸಿಯೊಂದಿಗೆ ಸಂಪರ್ಕದಲ್ಲಿದ್ದ. ಕೊಲೆ ನಡೆದ ದಿನದಂದು ಪೊಲೀಸರಿಗೆ ಕರೆ ಮಾಡುವ ಮುನ್ನ ಅವಿನಾಶ್ ತನ್ನ ಪ್ರೇಯಸಿಗೆ ನಾಲ್ಕು ಬಾರಿ ಕರೆ ಮಾಡಿದ್ದ ಹಾಗೂ ಬಾತ್ರೂಮ್ನಲ್ಲಿ ಬಿದ್ದಿದ್ದ ಹೆಂಡತಿಯ ಹೆಣದ ಫೋಟೋವನ್ನು ಕಳುಹಿಸಿದ್ದ ಎಂದು ಡಿಜಿಟಲ್ ಸಾಕ್ಷ್ಯಗಳು ಹೇಳಿವೆ.
ರಾಜಿತಾ ಅವರ ಮೊಬೈಲ್ ಫೋನ್ ಪರಿಶೀಲಿಸಿದಾಗ ಮತ್ತೊಂದು ಆಘಾತಕಾರಿ ಸಾಕ್ಷ್ಯ ಲಭ್ಯವಾಗಿದೆ. ಅವಿನಾಶ್ ತನಗೆ ಕೊಟ್ಟ ಜ್ಯೂಸ್ ತುಂಬಾ ಕಹಿಯಾಗಿರುತ್ತಿದ್ದವು ಎಂದು ರಾಜಿತಾ ಪತಿಗೆ ಮೆಸೇಜ್ ಮಾಡಿದ್ದರು.
ತಾನು ಸಾವನ್ನಪ್ಪುವ ಕೆಲವೇ ಗಂಟೆಗಳ ಮುನ್ನವೂ ರಾಜಿತಾ ಪತಿಗೆ ವಾಟ್ಸಾಪ್ ಮಾಡಿ, ನೀನು ಮಾಡಿಕೊಟ್ಟ ಸ್ಮೂಥಿ ತೀರಾ ಕಹಿಯಾಗಿದ್ದು, ಕೆಮ್ಮಿನ ಸಿರಪ್ನಂತಿತ್ತು ಎಂದು ಬರೆದಿದ್ದರು. ಇದರಿಂದಾಗಿ ಅವಿನಾಶ್ ಮೊದಲು ಆಕೆಗೆ ಪಾನೀಯದಲ್ಲಿ ವಿಷ ಅಥವಾ ಅಮಲು ಪದಾರ್ಥ ನೀಡಿ, ಆಕೆ ಪ್ರಜ್ಞೆ ತಪ್ಪಿದ ನಂತರ ಕತ್ತು ಹಿಸುಕಿ ಕೊಂದಿದ್ದಾನೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಜೀವಾವಧಿ ಶಿಕ್ಷೆ
ಅಮೆರಿಕದ ಕಿಂಗ್ ಕೌಂಟಿ ನ್ಯಾಯಾಲಯವು ಆರೋಪಿ ಅವಿನಾಶ್ ನಾರ್ನೆಗೆ ಸದ್ಯಕ್ಕೆ ಯಾವುದೇ ಕಾರಣಕ್ಕೂ ದೇಶ ಬಿಟ್ಟು ಓಡಿಹೋಗದಂತೆ ಬರೋಬ್ಬರಿ 5 ಮಿಲಿಯನ್ ಡಾಲರ್ (ಸುಮಾರು 41 ಕೋಟಿ ರೂಪಾಯಿ) ಭಾರಿ ಮೊತ್ತದ ಜಾಮೀನು ರಹಿತ ಬಾಂಡ್ ವಿಧಿಸಿ ಜೈಲಿಗಟ್ಟಿದೆ.
ಅಪರಾಧ ಸಾಬೀತಾದರೆ ಆರೋಪಿಗೆ ಯಾವುದೇ ಪೆರೋಲ್ ಇಲ್ಲದೆ ಕಡ್ಡಾಯ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸುವ ಅವಕಾಶವಿದೆ. ಭಾರತದಲ್ಲಿರುವ ಆತನ ಪ್ರೇಯಸಿಯನ್ನೂ ಈ ಕೊಲೆಯ ಸಂಚಿನ ಭಾಗವಾಗಿ ಪರಿಗಣಿಸಿ ಅಮೆರಿಕ ತನಿಖಾ ಸಂಸ್ಥೆಗಳು ಆಕೆಯನ್ನು ಪ್ರಶ್ನಿಸಲು ಭಾರತೀಯ ರಾಯಭಾರ ಕಚೇರಿಯ ಸಹಾಯ ಕೋರುವ ಸಾಧ್ಯತೆಯಿದೆ.