ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

37ವರ್ಷಗಳ ಬಳಿಕ ಕಾರಗೃಹದಿಂದ ಬಿಡುಗಡೆಯಾದ ಸಾಯಿಬಣ್ಣ: ಭಾರತದಲ್ಲೇ ಅತ್ಯಂತ ದೀರ್ಘಾವಧಿ ಜೈಲುಶಿಕ್ಷೆ ಅನುಭವಿಸಿದ ಕೈದಿ ಈತ


ಬೆಂಗಳೂರು: ಮೊದಲ ಪತ್ನಿಯನ್ನು ಕೊಲೆಗೈದು ಜೈಲು ಸೇರಿದವನು ಬಿಡುಗಡೆಗೊಂಡ ಬಳಿಕ ಮತ್ತೊಂದು ಮದುವೆಯಾಗಿ ಆಕೆಯನ್ನೂ, ಮಗಳನ್ನು ಭೀಕರವಾಗಿ ಕೊಲೆಗೈದು ಜೈಲು ಸೇರಿದ್ದ. ಹೀಗೆ ಬರೋಬ್ಬರಿ 37 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ 72 ವರ್ಷದ ಸಾಯಿಬಣ್ಣ ಎನ್. ನಾಟೀಕರ್ ಎಂಬಾತ ಕೊನೆಗೂ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾನೆ.

ಮುಖ ತುಂಬಾ ಬಿಳಿ ಗಡ್ಡ, ತಲೆ ತುಂಬಾ ಬಿಳಿ ಕೂದಲು, ವಯೋಸಹಜ ಆವರಿಸಿದ ಮುದಿತನದೊಂದಿಗೆ ಸಾಯಿಬಣ್ಣ ಎನ್. ನಾಟೀಕರ್ ಇತ್ತೀಚೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ದ್ವಾರದಿಂದ ಹೊರಗೆ ನಡೆದು ಬಂದಿದ್ದಾನೆ. ಬರೋಬ್ಬರಿ ಮೂರುವರೆ ದಶಕಗಳಿಗಳೂ ಅಧಿಕ ಕಾಲ ಕತ್ತಲೆಯ ಕೋಣೆಯಲ್ಲಿದ್ದ ಸಾಯಿಬಣ್ಣ ಕೊನೆಗೂ ಜೈಲಿನಿಂದ ಹೊರ ಬಂದಿದ್ದಾನೆ. ಜೈಲು ಅಧಿಕಾರಿಗಳ ಪ್ರಕಾರ, ಸಾಯಿಬಣ್ಣ ಭಾರತದಲ್ಲೇ ಅತಿ ಹೆಚ್ಚು ಕಾಲ ಅಂದರೆ ಸತತ 37 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ದೇಶದ ಮೊದಲ ಕೈದಿ.

ಈ ಕುರಿತು ಮಾತನಾಡಿರುವ ಕಾರಾಗೃಹ ಇಲಾಖೆ ಡಿಜಿಪಿ ಆಲೋಕ್ ಕುಮಾರ್, ‘ನಾನು ಈ ಹಿಂದೆ ಬೆಳಗಾವಿ ಮತ್ತು ಕಲಬುರಗಿ ಜೈಲಿನಲ್ಲಿದ್ದಾಗ ಸಾಯಿಬಣ್ಣನನ್ನು ಭೇಟಿಯಾಗಿದ್ದೆ. ಜೈಲಿನೊಳಗೆ ಈತನ ನಡವಳಿಕೆ ಅತ್ಯಂತ ಉತ್ತಮವಾಗಿತ್ತು’ ಎಂದು ತಿಳಿಸಿದ್ದಾರೆ.

ಸಾಯಿಬಣ್ಣನ ಅಪರಾಧ ಕೃತ್ಯ ಅತ್ಯಂತ ಭಯಾನಕವಾದುದು. 1988ರಲ್ಲಿ ಈತ ತನ್ನ ಮೊದಲ ಪತ್ನಿ ಮಲ್ಲವ್ವ ಎಂಬಾಕೆಯ ಶೀಲವನ್ನು ಶಂಕಿಸಿ ಭೀಕರವಾಗಿ ಕೊಲೆ ಮಾಡಿದ್ದ. ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಈತನನ್ನು 1994ರಲ್ಲಿ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಜೈಲಿನಿಂದ ಹೊರಬಂದ ಈತ ನಾಗಮ್ಮ ಎಂಬಾಕೆಯನ್ನು ಎರಡನೇ ಮದುವೆಯಾದ. ಇವರಿಗೆ ಹೆಣ್ಣು ಮಗುವೂ ಆಯಿತು.  ಆದರೆ ಮಗುವಾದ ಕೆಲವೇ ವಾರಗಳಲ್ಲಿ ಎರಡನೇ ಪತ್ನಿಯ ಮೇಲೂ ಅನುಮಾನಗೊಂಡು, ಆಕೆಯನ್ನು ಮತ್ತು ಪುಟ್ಟ ಮಗಳು ವಿಜಯಲಕ್ಷ್ಮಿಯನ್ನು ಅಮಾನುಷವಾಗಿ ಕೊಚ್ಚಿ ಕೊಂದಿದ್ದನು.

ಸಹಕಾರ ವಲಯದಲ್ಲಿ ಕೆಲಸ ಮಾಡುತ್ತಿದ್ದ ಸಾಯಿಬಣ್ಣ ಈ ಭೀಕರ ಕೊಲೆಗಳಿಂದಾಗಿ ಕೆಲಸ ಕಳೆದುಕೊಂಡಿದ್ದ. ಇಂದು 1 ಕೋಟಿ ರೂ.ಗೂ ಅಧಿಕ ಬೆಲೆಬಾಳುವ 10ಎಕರೆ ಜಮೀನನ್ನೂ ಕಳೆದುಕೊಂಡಿದ್ದಾನೆ. 2003ರಲ್ಲಿ ವಿಚಾರಣಾ ನ್ಯಾಯಾಲಯವು ಈ ಜೋಡಿ ಕೊಲೆಯ ಕ್ರೌರ್ಯವನ್ನು ಪರಿಗಣಿಸಿ ಈತನಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆದರೆ ಬಳಿಕ ಕರ್ನಾಟಕ ಹೈಕೋರ್ಟ್ ಇದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತನೆಗೊಳಿಸಿತು. ಸಾಯಿಬಣ್ಣ ಸುಮಾರು ಹತ್ತು ವರ್ಷಗಳ ಕಾಲ ಜೈಲಿನಲ್ಲಿ ಏಕಾಂತ ವಾಸ ಅನುಭವಿಸಿದ್ದನ್ನು ಹೈಕೋರ್ಟ್ ಕಾನೂನುಬಾಹಿರ ಮತ್ತು ಅತಿಮಾನುಷ ಎಂದು ಪರಿಗಣಿಸಿತು. ಜೊತೆಗೆ ಈತನ ಕ್ಷಮಾದಾನ ಅರ್ಜಿಯ ನಿರ್ಧಾರದಲ್ಲಿ ಆದ ವಿಳಂಬವೂ ಈತನಿಗೆ ವರದಾನವಾಗಿ ಪರಿಣಮಿಸಿ, ಈಗ 37 ವರ್ಷಗಳ ಬಳಿಕ ಬಿಡುಗಡೆಗೆ ಹಾದಿ ಮಾಡಿಕೊಟ್ಟಿದೆ.

ಜೈಲಿನಿಂದ ಬಿಡುಗಡೆಯಾದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಾಯಿಬಣ್ಣ, ಕೊಲೆಯ ಬಗ್ಗೆ ಯಾವುದೇ ಪಶ್ಚಾತ್ತಾಪವನ್ನು ವ್ಯಕ್ತಪಡಿಸಲಿಲ್ಲ. ‘ನನ್ನ ಪತ್ನಿಯರು ದಾರಿ ತಪ್ಪಿದ್ದಕ್ಕೆ ನಾನು ಕೊಂದಿದ್ದೇನೆ. ಮೊದಲ ಕೊಲೆಯ ವೇಳೆ ಆಕೆಯ ಜೊತೆಯಿದ್ದ ವ್ಯಕ್ತಿ ಓಡಿ ಹೋದ, ಹಾಗಾಗಿ ಹೆಂಡತಿಯನ್ನು ಕೊಂದೆ. ಎರಡನೇ ಮದುವೆಯಾದಾಗ ನನ್ನ ಅತ್ತೆಯೇ ಮಗಳನ್ನು ದಾರಿ ತಪ್ಪಿಸಿದಳು. ಹೆಂಡತಿ ಕುರುಡಿ ಅಥವಾ ಕುಂಟಿಯಾಗಿದ್ದರೂ ಪರವಾಗಿಲ್ಲ, ಆದರೆ ಆಕೆಯ ಶೀಲ ಮುಖ್ಯ’ ಎಂದು ಹೇಳಿದ್ದಾನೆ.