ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಜಿಮ್ ಟ್ರೈನರ್ ವಿಜಯ್ ಕೊಲೆಗೆ ಬಿಗ್​ ಟ್ವಿಸ್ಟ್​​: ಪುತ್ರಿಯೊಂದಿಗಿನ ಪ್ರೇಮ ಸಂಬಂಧ ಮುರಿಯಲು ಪ್ರಭಾವಿ ಉದ್ಯಮಿಯಿಂದ ಕೊಲೆಗೆ ಸುಪಾರಿ?




ಬೆಂಗಳೂರು: ಜಿಮ್ ಟ್ರೈನರ್ ವಿಜಯ್ ಕೊಲೆ ಪ್ರಕರಣಕ್ಕೆ ಪ್ರಮುಖ ತಿರುವು ಸಿಕ್ಕಿದೆ. ಪ್ರಭಾವಿ ಉದ್ಯಮಿಯ ಪುತ್ರಿಯೊಂದಿಗಿನ ಪ್ರೇಮ ಸಂಬಂಧವೇ ಈ ಕೊಲೆಗೆ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣದಲ್ಲಿ ಈಗಾಗಲೇ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ಕಾಮಿನೇನಿ ಪ್ರಸಾದ್ ಸುಪಾರಿ ನೀಡಿ ವಿಜಯ್ ಹತ್ಯೆ ಮಾಡಿಸಿದ್ದಾರೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರೇಮ, ಹಣ ಮತ್ತು ಪ್ರತಿಷ್ಠೆಯ ಸುತ್ತ ಸುತ್ತುತ್ತಿರುವ ಈ ಹೈಪ್ರೊಫೈಲ್ ಕೊಲೆ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದ ಜಿಮ್ ಟ್ರೈನರ್ ವಿಜಯ್ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆಯುತ್ತಿದೆ. ಆರಂಭದಲ್ಲಿ ಅಪರಿಚಿತ ಮೃತದೇಹವಾಗಿ ಪತ್ತೆಯಾಗಿದ್ದ ಪ್ರಕರಣ, ಬಳಿಕ ವಿಜಯ್ ಮೃತದೇಹ ಎಂಬುದು ದೃಢಪಟ್ಟ ಬಳಿಕ ಸುಪಾರಿ ಕೊಲೆಯ ಶಂಕೆಗೆ ಕಾರಣವಾಗಿತ್ತು. ಪ್ರಕರಣ ಸಂಬಂಧ ಬನ್ನೇರುಘಟ್ಟ ಪೊಲೀಸರು ಆನೇಕಲ್ ಮೂಲದ ಶ್ರೀರಾಮ್, ಸುಮಿತ್, ವೆಂಕಟೇಶಯ್ಯ ಹಾಗೂ ಬಾಬು ಎಂಬ ನಾಲ್ವರನ್ನು ಬಂಧಿಸಿದ್ದು, ತನಿಖೆ ವೇಳೆ ಹಲವು ಸ್ಪೋಟಕ ಸಂಗತಿಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ.

ಉದ್ಯಮಿ ಕಾಮಿನೇನಿ ಪ್ರಸಾದ್ ಎಂಬಾತ ಆನೇಕಲ್ ಮೂಲದ ಒಬ್ಬ ವಕೀಲನ ಮೂಲಕ ಸುಪಾರಿ ನೀಡಿ ವಿಜಯ್ ಹತ್ಯೆ ಮಾಡಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಂಧಿತ ಪ್ರಮುಖ ಆರೋಪಿ ಶ್ರೀರಾಮ್ ಕೂಡ ವಿಚಾರಣೆ ವೇಳೆ ಈ ಕುರಿತು ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ವಿಜಯ್, ಕೆಆರ್ ಪುರಂ ಪ್ರದೇಶದಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ. ಏಳು ವರ್ಷಗಳ ಹಿಂದೆ ವಿವಾಹವಾಗಿದ್ದ ವಿಜಯ್‌ಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಜಿಮ್‌ಗೆ ತರಬೇತಿಗಾಗಿ ಬರುತ್ತಿದ್ದ ಉದ್ಯಮಿಯ ಪುತ್ರಿಯೊಂದಿಗೆ ವಿಜಯ್‌ಗೆ ಪ್ರೇಮ ಸಂಬಂಧ ಬೆಳೆದಿತ್ತು ಎನ್ನಲಾಗಿದೆ. ಈ ವಿಚಾರ ತಿಳಿದ ಬಳಿಕ ವಿಜಯ್ ಪತ್ನಿ ಮಕ್ಕಳೊಂದಿಗೆ ತವರು ಮನೆ ಸೇರಿಕೊಂಡಿದ್ದಳು. ಮತ್ತೊಂದೆಡೆ ವಿಜಯ್ ಮತ್ತು ಯುವತಿ ಮನೆ ಬಿಟ್ಟು ಪರಾರಿಯಾಗಿದ್ದರು. ಈ ಸಂಬಂಧ ಉದ್ಯಮಿ ಕಾಮಿನೇನಿ ಪ್ರಸಾದ್ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಇಬ್ಬರನ್ನೂ ಪತ್ತೆಹಚ್ಚಿ ಎಚ್ಚರಿಕೆ ಕೂಡ ನೀಡಿದ್ದರು. ಅಲ್ಲದೆ ವಿಜಯ್ ಮೇಲೆ ಹಲ್ಲೆ ನಡೆಸುವ ಪ್ರಯತ್ನವೂ ನಡೆದಿತ್ತು ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.

ಇನ್ನು ಸುಮಾರು ಹತ್ತು ದಿನಗಳ ಹಿಂದೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳೇಶ್ವರಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ವಿಜಯ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಕಾಲ್ ಡಿಟೇಲ್ಸ್, ಸಿಡಿಆರ್, ಲೊಕೇಶನ್ ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಪ್ರಕರಣದ ಆರೋಪಿಗಳೆಂದು ಹೇಳಲಾಗುತ್ತಿರುವ ಉದ್ಯಮಿ ಕಾಮಿನೇನಿ ಪ್ರಸಾದ್ ಹಾಗೂ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರೆನ್ನಲಾದ ವಕೀಲ ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ಕೇಂದ್ರ ವಲಯ ಐಜಿಪಿ ಗಿರೀಶ್ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಕರಣದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.