ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನೇ ಹೋಲುವ ಮತ್ತೊಂದು ಭಯಾನಕ ಕೊಲೆ ಪ್ರಕರಣವೊಂದು ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ವಿವಾಹಿತ ಮಹಿಳೆಯೋರ್ವರಿಗೆ ಅಶ್ಲೀಲ ವೀಡಿಯೋ ಕಳುಹಿಸಿ, ತನ್ನೊಂದಿಗೆ ಸಹಕರಿಸುವಂತೆ ಒತ್ತಾಯಿಸಿ ನಿರಂತರ ಕಿರುಕುಳ ನೀಡುತ್ತಿದ್ದ ಯುವಕನನ್ನು ಆಕೆಯ ಪತಿ ಹಾಗೂ ಸಹೋದರ ಸೇರಿ ಕತ್ತು ಬಿಗಿದು ಕೊಲೆಗೈದು, ಮೃತದೇಹವನ್ನು ಬೆಂಕಿ ಹಚ್ಚಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವ ಆರೋಪ ಕೇಳಿಬಂದಿದೆ.
ಖಾಸಗಿ ಲ್ಯಾಬ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಬಸವನಗೌಡ ಪಾಟೀಲ್ (26) ಕೊಲೆಯಾದ ಯುವಕ. ಕೊಲೆ ಪ್ರಕರಣದ ಆರೋಪಿಗಳಾದ ದೊಡ್ಡ ಬಸವನಗೌಡ, ಆತನ ಪತ್ನಿ ಶ್ವೇತಾ ಹಾಗೂ ಆಕೆಯ ಸಹೋದರ ವಿಜಯ್ ಎಂಬವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೊಲೆಯಾದ ಯುವಕ ಬಸವನಗೌಡ ಜೂನ್ 7ರಂದು ರಾತ್ರಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಮರುದಿನ ಬೆಳಗ್ಗೆ ಮೋಕಾ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಪುರ-ತಂಬ್ರಹಳ್ಳಿ ಎಲ್‌ಎಲ್‌ಸಿ ಕಾಲುವೆ ಸಮೀಪ ಅರೆಬೆಂದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಇದೊಂದು ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ ಹತ್ಯೆ ಇರಬಹುದು ಎಂದು ಶಂಕಿಸಲಾಗಿತ್ತು. ಆದರೆ ತನಿಖೆ ಮುಂದುವರಿದಂತೆ ಹೊರಬಿದ್ದಿವೆ. ಬೆಚ್ಚಿಬೀಳಿಸುವ ಸತ್ಯಾಂಶಗಳು ಬೆಳಕಿಗೆ ಬಂದಿದೆ.
ಪೊಲೀಸ್ ಮಾಹಿತಿ ಪ್ರಕಾರ, ಮೃತ ಬಸವನಗೌಡ ಕಳೆದ ಒಂದು ವರ್ಷದಿಂದ ವಿವಾಹಿತೆ ಶ್ವೇತಾ ಬಾಕೆಗೆ ಅಶ್ಲೀಲ ವಿಡಿಯೋಗಳು ಹಾಗೂ ಸಂದೇಶಗಳನ್ನು ಕಳುಹಿಸಿ, ತನ್ನೊಂದಿಗೆ ಸಹಕರಿಸುವಂತೆ ಒತ್ತಾಯಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಬಸವನಗೌಡನ ವರ್ತನೆಯಿಂದ ಬೇಸತ್ತ ಶ್ವೇತಾ ಈ ವಿಚಾರವನ್ನು ತನ್ನ ಪತಿ ಹಾಗೂ ಸಹೋದರನಿಗೆ ತಿಳಿಸಿದ್ದಳು. ಇದರಿಂದ ಆಕ್ರೋಶಗೊಂಡ ಮೂವರು ಸೇರಿ ಯುವಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಯೋಜನೆಯಂತೆ ಜೂನ್ 7ರಂದು ಶ್ವೇತಾಳಿಂದಲೇ ಬಸವನಗೌಡನಿಗೆ ಕರೆ ಮಾಡಿ ಮೋಕಾ ಸಮೀಪದ ನಿರ್ಜನ ಪ್ರದೇಶಕ್ಕೆ ಬರಲು ಹೇಳಲಾಗಿತ್ತು. ಅಲ್ಲಿಗೆ ಬಂದ ತಕ್ಷಣ ಮೊದಲೇ ಹೊಂಚು ಹಾಕಿ ಕಾದಿದ್ದ ಮಹಿಳೆಯ ಪತಿ ದೊಡ್ಡ ಬಸವನಗೌಡ ಮತ್ತು ಸಹೋದರ ವಿಜಯ್ ಸೇರಿ ಹಗ್ಗದಿಂದ ಆತನ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಬಳಿಕ ಶವವನ್ನು ಸುಮಾರು 10 ಕಿ.ಮೀ. ದೂರದ ನಿರ್ಜನ ಪ್ರದೇಶಕ್ಕೆ ಸಾಗಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ. ಕೃತ್ಯ ಎಸಗಿದ ಬಳಿಕ ಮೂವರೂ ಬೆಂಗಳೂರಿಗೆ ಪರಾರಿಯಾಗಿದ್ದರು. ಮೃತ ಬಸವನಗೌಡನ ಮೊಬೈಲ್ ಪರಿಶೀಲಿಸಿದ ವೇಳೆ ಆತ ಹಲವು ಮಹಿಳೆಯರಿಗೆ ಅಸಭ್ಯ ಸಂದೇಶಗಳನ್ನು ಕಳುಹಿಸಿರುವುದು ಪತ್ತೆಯಾಗಿದೆ. ಮೊಬೈಲ್ ಲೊಕೇಶನ್, ಕಾಲ್ ಡೀಟೇಲ್ಸ್ ಹಾಗೂ ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ಆರೋಪಿಗಳ ಸುಳಿವು ಪತ್ತೆಹಚ್ಚಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.