ಡೆಹ್ರಾಡೂನ್: ದೆಹಲಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಯುವತಿ ತನ್ನ ಪತಿಯೊಂದಿಗೆ ಮಸ್ಸೂರಿಗೆ ಹನಿಮೂನ್ಗೆ ಹೋಗಿದ್ದಾಗ ಹೋಂಸ್ಟೇ ರೂಮ್‌ನಲ್ಲಿ ನಿಗೂಢವಾಗಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ದೆಹಲಿಯಿಂದ ಪತಿಯೊಂದಿಗೆ ಉತ್ತರಾಖಂಡದ ಪ್ರಸಿದ್ಧ ಗಿರಿಧಾಮವಾದ ಮಸ್ಸೂರಿಗೆ ಪ್ರವಾಸಕ್ಕೆ ತೆರಳಿದ್ದ ಈ 27 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಹೋಂಸ್ಟೇಯಲ್ಲಿ ನಿಗೂಢವಾಗಿ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಆಕೆಯ ದೇಹದ ಮೇಲೆ ಬಟ್ಟೆಗಳಿರಲಿಲ್ಲ. ಮೂಗಿನಿಂದ ರಕ್ತ ಸ್ರಾವವಾಗಿತ್ತು. ರೂಂನಲ್ಲಿ ರಕ್ತದ ಕಲೆಗಳು ಕಂಡುಬಂದಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಜೋಡಿ ಇತ್ತೀಚೆಗಷ್ಟೇ ಮದುವೆಯಾಗಿತ್ತು. ಈ ಹಿಂದೆ ಮೇಘಾಲಯಕ್ಕೆ ಹನಿಮೂನ್ಗೆ ತೆರಳಿದ್ದ ವೇಳೆ ಪತಿಯನ್ನು ಪತ್ನಿಯೇ ಕೊಲೆ ಮಾಡಿಸಿದ್ದ ಪ್ರಕರಣದ ನೆನಪಿನ್ನೂ ಮಾಸಿಲ್ಲ. ಇದೀಗ ಮಸ್ಸೂರಿಯಲ್ಲಿ ಅದೇ ರೀತಿಯ ಅನುಮಾನಾಸ್ಪದ ಸಾವಿನ ಪ್ರಕರಣ ನಡೆದಿದೆ. ಪತಿಯೊಂದಿಗೆ ರಜೆ ಕಳೆಯಲು ಬಂದಿದ್ದ ದೆಹಲಿಯ 27 ವರ್ಷದ ಐಟಿ ಉದ್ಯೋಗಿ ತಂಗಿದ್ದ ಹೋಂಸ್ಟೇ ರೂಮ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಉತ್ತರಾಖಂಡ ಪೊಲೀಸರು ಕೋಣೆಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಹೋಂಸ್ಟೇ ಕೋಣೆಯೊಳಗೆ ಯುವತಿಯ ಮೃತದೇಹ ಅತ್ಯಂತ ಸಂಶಯಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯುವತಿಯ ದೇಹದ ಮೇಲೆ ಬಟ್ಟೆಗಳು ಇರಲಿಲ್ಲ. ಬೆತ್ತಲಾಗಿದ್ದ ಆ ದೇಹದ ಮೇಲೆ ರಕ್ತದ ಕಲೆಗಳಿತ್ತು. ಆಕೆಯ ಮೂಗಿನಿಂದ ತೀವ್ರವಾಗಿ ರಕ್ತ ಸ್ರಾವವಾಗುತ್ತಿತ್ತು. ಬೆಡ್ ಶೀಟ್ ಮತ್ತು ಕೋಣೆಯ ಕೆಲವು ಭಾಗಗಳಲ್ಲಿ ರಕ್ತದ ಕಲೆಗಳು ಹರಡಿದ್ದವು.
ಕೋಣೆಯಲ್ಲಿದ್ದ ವಸ್ತುಗಳು ಸಹ ಅಸ್ತವ್ಯಸ್ತಗೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸಾವಿನ ಮುನ್ನ ಅಲ್ಲಿ ಏನೋ ನಡೆದಿದೆ ಎಂಬ ಸಂಶಯವನ್ನು ಬಲಗೊಳಿಸಿದೆ. ಇತ್ತೀಚೆಗಷ್ಟೇ ಮದುವೆಯಾಗಿದ್ದ ಈ ದಂಪತಿ ಕೆಲವು ದಿನಗಳ ಹಿಂದಷ್ಟೇ ಮಸ್ಸೂರಿಗೆ ಬಂದು ಈ ಹೋಂಸ್ಟೇನಲ್ಲಿ ತಂಗಿದ್ದರು. ಈ ಘಟನೆ ನಡೆದ ಸಮಯದಲ್ಲಿ ಪತಿ ಎಲ್ಲಿದ್ದ? ಆಕೆಗೆ ಏನಾಯಿತು? ಎಂಬ ಬಗ್ಗೆ ಪೊಲೀಸರು ಪತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಸದ್ಯಕ್ಕೆ ಇದು ಕೊಲೆಯೋ, ಆತ್ಮಹತ್ಯೆಯೋ ಅಥವಾ ಅತಿಯಾದ ಮದ್ಯಸೇವನೆಯಂತಹ ಬೇರೆ ಯಾವುದಾದರೂ ಕಾರಣದಿಂದ ಸಂಭವಿಸಿದ ಸಾವೋ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಶವದ ಸ್ಥಿತಿಯನ್ನು ನೋಡಿದರೆ ಇವರ ನಡುವೆ ಜಗಳ ನಡೆದಿರುವ ಅಥವಾ ಉಸಿರುಗಟ್ಟಿಸಿ ಕೊಲೆಯಾರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಸದ್ಯ ಪ್ರಕರಣವನ್ನು ಉತ್ತರಾಖಂಡ ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ.
ಮೃತಪಟ್ಟ ರಾಧಾ ಗಾಯತ್ರಿ ಹಾಗೂ ಆಕೆಯ ಪತಿ ಶ್ರೀಚರಣ್ ಇಬ್ಬರೂ ಆಂಧ್ರಪ್ರದೇಶದ ವಿಶಾಖಪಟ್ಟಣದವರು. ಶ್ರೀ ಚರಣ್ ಪುಣೆಯಲ್ಲಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ. ರಾಧಾ ಗಾಯತ್ರಿ ದೆಹಲಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. 2025ರ ನವೆಂಬರ್ 8ರಂದು ಹಿರಿಯರ ಸಮ್ಮುಖದಲ್ಲಿ ಇಬ್ಬರೂ ವಿವಾಹವಾದರು. ಅವರು ಜೂನ್ 13ರಂದು ದೆಹಲಿಯಿಂದ ಋಷಿಕೇಶಕ್ಕೆ ರಜೆಗಾಗಿ ಹೊರಟರು. ಮರುದಿನ, ಅವರು ತಡರಾತ್ರಿ ಮಸ್ಸೂರಿಯ ತಿಪ್ರಿಧರ್ ಪ್ರದೇಶದ ಕಿಯಾನಾ ಹೋಂಸ್ಟೇ ತಲುಪಿ ಅಲ್ಲಿನ ಬ್ಲಿಸ್ ಎಂಬ ಕೋಣೆಯಲ್ಲಿ ತಂಗಿದ್ದರು. ಆ ರಾತ್ರಿ ಅವರಿಬ್ಬರೂ ಆಲ್ಕೋಹಾಲ್ ಸೇವಿಸಿದ್ದಾರೆ ಎಂದು ಆಕೆಯ ಪತಿಯೇ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಬೆಳಿಗ್ಗೆ ಆ ಯುವತಿಯ ಮೃತದೇಹ ಪತ್ತೆಯಾಗಿದೆ.
ಪತಿ ಹಾಗೂ ಪತ್ನಿ ರಾತ್ರಿ ರೂಂನಲ್ಲೇ ಮದ್ಯ ಸೇವಿಸಿದ್ದರು. ಬೆಳಗಿನ ಜಾವ 3.30ಕ್ಕೆ ಮಲಗಲು ಹೋಗಿದ್ದಾರೆ. ಬೆಳಗ್ಗೆ ಎದ್ದಾಗ ಗಾಯತ್ರಿ ರಕ್ತದ ಮಡುವಿನಲ್ಲಿ ಬೆತ್ತಲೆಯಾಗಿ ಬಿದ್ದಿರುವುದನ್ನು ನೋಡಿ ಶ್ರೀಚರಣ್ ಪೊಲೀಸರಿಗೆ ತಿಳಿಸಿದ್ದಾರೆ. ಪತಿಯ ಹೇಳಿಕೆಯ ಆಧಾರದ ಮೇಲೆ, ಉತ್ತರಾಖಂಡ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದರು. ಆಕೆ ಆಲ್ಕೋಹಾಲ್ ಹೆಚ್ಚಾಗಿದ್ದರಿಂದ ಮೃತಪಟ್ಟಿದ್ದಾರಾ? ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಕೊಲೆಯಾಗಿದ್ದಾರಾ? ಎಂಬ ಬಗ್ಗೆ ಮರಣೋತ್ತರ ಪರೀಕ್ಷೆಯ ಬಳಿಕ ನಿಖರ ಮಾಹಿತಿ ತಿಳಿಯಲಿದೆ.