ಕರಾವಳಿ ಜನತೆಗೆ ಗುಡ್ ನ್ಯೂಸ್: ಜೂನ್‌ನಿಂದ ಹಳಿಗೆ ಬರಲಿದೆ ಮಂಗಳೂರು-ಬೆಂಗಳೂರು 'ವಂದೇ ಭಾರತ್' ರೈಲು!

ಕರಾವಳಿ ರೈಲ್ವೆ ಅಪ್ಡೇಟ್

ಕರಾವಳಿ ಜನತೆಗೆ ಗುಡ್ ನ್ಯೂಸ್: ಜೂನ್‌ನಿಂದ ಹಳಿಗೆ ಬರಲಿದೆ ಮಂಗಳೂರು-ಬೆಂಗಳೂರು 'ವಂದೇ ಭಾರತ್' ರೈಲು!

ಪ್ರಕಟಣೆ: ಮೇ 24, 2026 | ಮಂಗಳೂರು ವಿಶೇಷ ವರದಿ
Union Minister V Somanna

ಮಂಗಳೂರು ಮತ್ತು ಸಿಲಿಕಾನ್ ಸಿಟಿ ಬೆಂಗಳೂರು ನಡುವೆ ಬಹುನಿರೀಕ್ಷಿತ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲು ಸೇವೆ ಜೂನ್ ತಿಂಗಳಿನಲ್ಲಿ ಅಧಿಕೃತವಾಗಿ ಆರಂಭವಾಗಲಿದೆ. ದೇಶದ ವಿವಿಧ ಹೊಸ ರೈಲ್ವೆ ಯೋಜನೆಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಹೈ-ಟೀಕ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಪ್ರಕಟಿಸಿದ್ದಾರೆ.

ಮಂಗಳೂರು: ಶನಿವಾರ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, 'ಅಮೃತ್ ಭಾರತ್' ಯೋಜನೆಯಡಿ ನಡೆಯುತ್ತಿರುವ ನವೀಕರಣ ಕಾಮಗಾರಿಗಳನ್ನು ಖುದ್ದಾಗಿ ಪರಿಶೀಲಿಸಿದ ಬಳಿಕ ಸಚಿವರು ಮಾಧ್ಯಮಗಳೊಂದಿಗೆ ಮಾತನಾಡಿದರು. "ಬೆಂಗಳೂರು-ಮಂಗಳೂರು ನಡುವಿನ ಸಕಲೇಶಪುರ ಮತ್ತು ಕುಕ್ಕೆ ಸುಬ್ರಹ್ಮಣ್ಯ ಮಾರ್ಗದ 55 ಕಿಲೋಮೀಟರ್ ವ್ಯಾಪ್ತಿಯ ಕಠಿಣ ರೈಲ್ವೆ ಹಳಿಯ ವಿದ್ಯುದ್ದೀಕರಣ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಸಂಪೂರ್ಣ ಮಾರ್ಗ ವಿದ್ಯುದ್ದೀಕರಣವಾಗಿರುವುದರಿಂದ ಕರಾವಳಿ ಮತ್ತು ರಾಜಧಾನಿ ನಡುವೆ ಹೆಚ್ಚುವರಿ ರೈಲುಗಳನ್ನು ಓಡಿಸಲು ಹಾದಿ ಸುಗಮವಾಗಿದೆ" ಎಂದು ಸಚಿವರು ವಿವರಿಸಿದರು.

ಶಿವಮೊಗ್ಗ-ಮಂಗಳೂರು ಹೊಸ ರೈಲು ಮಾರ್ಗ ಸಿದ್ಧ

ಪ್ರಸ್ತಾವಿತ 332 ಕಿ.ಮೀ. ಉದ್ದದ ಶಿವಮೊಗ್ಗ-ಮಂಗಳೂರು ಹೊಸ ರೈಲು ಸಂಪರ್ಕದ ಅಂತಿಮ ಹಂತದ ಸ್ಥಳ ಸಮೀಕ್ಷೆ (FLS) ಮುಕ್ತಾಯಗೊಂಡಿದ್ದು, ಯೋಜನೆಗೆ ಒಪ್ಪಿಗೆ ಸಿಕ್ಕಿದೆ. ಅಂದಾಜು 3,300 ಕೋಟಿ ರೂಪಾಯಿ ವೆಚ್ಚದ ಈ ಬೃಹತ್ ಯೋಜನೆಗೆ ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಇದರೊಂದಿಗೆ ಹಾಸನ-ಮಂಗಳೂರು ನಡುವಿನ 247 ಕಿ.ಮೀ. ರೈಲು ಹಳಿಯನ್ನು 8,300 ಕೋಟಿ ರೂ. ವೆಚ್ಚದಲ್ಲಿ ದ್ವಿಗುಣಗೊಳಿಸುವ (Doubling) ಕಾಮಗಾರಿಯ ಪರಿಶೀಲನೆ ಪ್ರಗತಿಯಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಮಂಗಳೂರು ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್

ಮಂಗಳೂರು ಜಂಕ್ಷನ್ ನಿಲ್ದಾಣವನ್ನು 38 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಿಸಲಾಗುತ್ತಿದ್ದು, ಮುಂಬರುವ ಅಕ್ಟೋಬರ್ ಒಳಗೆ ಕಾಮಗಾರಿ ಮುಗಿಸಲು ಗಡುವು ನೀಡಲಾಗಿದೆ. ಇಲ್ಲಿ ಹೆಚ್ಚುವರಿ ಗೂಡ್ಸ್ ಲೈನ್ ಹಾಗೂ ಯಾರ್ಡ್ ಅಭಿವೃದ್ಧಿಪಡಿಸಲಾಗುವುದು. ಇಡೀ ಮಂಗಳೂರು ವಲಯದ ರೈಲ್ವೆ ಅಗತ್ಯತೆಗಳಿಗಾಗಿ ಸಮಗ್ರ 'ಮಾಸ್ಟರ್ ಪ್ಲಾನ್' ಸಿದ್ಧಪಡಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಮುಂದಿನ 6 ತಿಂಗಳಲ್ಲಿ ಪ್ರಮುಖ ಬದಲಾವಣೆಗಳು ಕಂಡುಬರಲಿವೆ.

ಜೊತೆಗೆ, ಶೋರ್ನೂರು-ಮಂಗಳೂರು ನಡುವಿನ 306 ಕಿ.ಮೀ. ಮಾರ್ಗದಲ್ಲಿ 3ನೇ ಮತ್ತು 4ನೇ ರೈಲು ಹಳಿ ನಿರ್ಮಾಣಕ್ಕೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲಾಗುತ್ತಿದ್ದು, ಭವಿಷ್ಯದಲ್ಲಿ ಈ ಮಾರ್ಗದಲ್ಲಿ ರೈಲುಗಳು ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವಂತೆ ಹಳಿಗಳನ್ನು ಮೇಲ್ದರ್ಜೆಗೇರಿಸಲಾಗುವುದು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಮೆಮು ರೈಲು ಪ್ರಸ್ತಾವನೆ ಹಾಗೂ ರೈಲುಗಳ ವಿಸ್ತರಣೆ

ಮಂಗಳೂರಿನಿಂದ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ನಡುವೆ ಸ್ಥಳೀಯ ಪ್ರಯಾಣಿಕರ ಅನುಕೂಲಕ್ಕಾಗಿ 'ಮೆಮು' (MEMU) ರೈಲು ಓಡಿಸಲು ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನು ಸಾರ್ವಜನಿಕರ ವಲಯದಲ್ಲಿ ಆತಂಕ ಮೂಡಿಸಿದ್ದ ಪಂಚಗಂಗಾ ಎಕ್ಸ್‌ಪ್ರೆಸ್ ಸೇರಿದಂತೆ ಕರಾವಳಿ ಭಾಗದ ಪ್ರಮುಖ ರೈಲುಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಅಥವಾ ವಿಳಂಬ ಮಾಡುವ ಯೋಚನೆ ರೈಲ್ವೆ ಇಲಾಖೆಯ ಮುಂದೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಮುಂಬೈ ಸಿಎಸ್‌ಟಿ, ಗೋಮಟೇಶ್ವರ ಹಾಗೂ ಯಶವಂತಪುರ ಎಕ್ಸ್‌ಪ್ರೆಸ್ ರೈಲುಗಳನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಸೆಂಟ್ರಲ್ ನಿಲ್ದಾಣದಲ್ಲಿ ಹೆಚ್ಚುವರಿ ಪ್ಲಾಟ್‌ಫಾರ್ಮ್ ನಿರ್ಮಿಸಲಾಗುವುದು ಎಂದರು.

ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಹಾಗೂ ಕನ್ನಡ ಕಡ್ಡಾಯಕ್ಕೆ ತಾಕೀತು

ಮಂಗಳೂರನ್ನು ಒಳಗೊಂಡಿರುವ ಕೊಂಕಣ, ನೈರುತ್ಯ ಮತ್ತು ದಕ್ಷಿಣ ರೈಲ್ವೆ ವಲಯಗಳನ್ನು ಒಂದೇ ಆಡಳಿತದಡಿ ತಂದು ಶೀಘ್ರದಲ್ಲೇ 'ಮಂಗಳೂರು ಪ್ರತ್ಯೇಕ ರೈಲ್ವೆ ವಿಭಾಗ' ರಚಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಹತ್ತಿರವಾಗುವಂತೆ ಸಮೀಪದಲ್ಲೇ ಹೊಸ ನಿಲ್ದಾಣ ನಿರ್ಮಿಸುವ ಪ್ರಸ್ತಾವನೆಗೂ ಚಾಲನೆ ನೀಡಲಾಗಿದೆ.

"ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ನಿಲ್ದಾಣಗಳಲ್ಲಿ ಸ್ಥಳೀಯ ಭಾಷಾ ಸಮಸ್ಯೆ ನಿವಾರಿಸಲು ಕಡ್ಡಾಯವಾಗಿ ಕನ್ನಡ ಬಲ್ಲ ಸಿಬ್ಬಂದಿಗಳನ್ನೇ ನೇಮಿಸಬೇಕು. ಬೇರೆ ರಾಜ್ಯದ ಸಿಬ್ಬಂದಿಯಾಗಿದ್ದರೂ ಕರ್ನಾಟಕದಲ್ಲಿ ಕನಿಷ್ಠ ಸಂವಹನ ನಡೆಸಲು ಕನ್ನಡ ಕಲಿಯಲೇಬೇಕು."
- ವಿ. ಸೋಮಣ್ಣ, ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ

ಇದೇ ವೇಳೆ ಮಂಗಳೂರು ಗೂಡ್ಸ್ ಶೆಡ್ ಬಳಿ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆ ನಿವಾರಿಸಲು ಅಗತ್ಯವಿದ್ದರೆ ಭೂಸ್ವಾಧೀನ ನಡೆಸಿ ಕೆಳಸೇತುವೆ (Underpass) ನಿರ್ಮಿಸಲಾಗುವುದು. ರಾಜ್ಯ ಸರ್ಕಾರ ಹಣ ನೀಡದಿದ್ದರೂ ತುರ್ತು ಕಾಮಗಾರಿ ಎಂದು ಪರಿಗಣಿಸಿ ರೈಲ್ವೆ ಇಲಾಖೆಯಿಂದಲೇ ನೇರವಾಗಿ ಹಣ ಭರಿಸಿ ಕೆಲಸ ಪೂರ್ಣಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ವಿಶೇಷ ಮೂಲಸೌಕರ್ಯ ವರದಿ |

BREAKING NEWS
Loading latest news...
Join our WhatsApp Channel Powered By : Online Pudu