ಮಂಗಳೂರು: ಮಹಾರಾಷ್ಟ್ರ ರಾಜ್ಯದ ಮುಂಬೈನಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತ ಬಂದ ವ್ಯಕ್ತಿಯೋರ್ವರು ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಖೈರಾನಿ ರಸ್ತೆಯ ಬಳಿ ಇದ್ದ ಮ್ಯಾನ್‌ಹೋಲ್ ಅನ್ನು ಕೆಲವು ದುರಸ್ತಿ ಕಾರ್ಯಗಳಿಗಾಗಿ ತೆರೆದಿಡಲಾಗಿತ್ತು. ಈ ವೇಳೆ 60 ವರ್ಷದ ಅಸ್ಲಾಂ ಇಸಾಕ್ ಶೇಖ್ ಎಂಬವರು ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ಬಂದು ಆಕಸ್ಮಿಕವಾಗಿ ಮ್ಯಾನ್‌ಹೋಲ್ ಒಳಗಡೆ ಬಿದ್ದಿದ್ದಾರೆ.
ಯಾದವ್ ನಗರದ ನಿವಾಸಿ ಅಸ್ಲಾಂ ಇಸಾಕ್ ಶೇಖ್ ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು ಸಾವನ್ನಪ್ಪಿದ್ದಾರೆ. ಮಳೆಯ ಸಂದರ್ಭ ಮುಂಬೈ ಮಹಾನಗರ ಪಾಲಿಕೆಯ ಅವಾಂತರವನ್ನು ಈ ಘಟನೆ ಮತ್ತೊಮ್ಮೆ ಬಹಿರಂಗಪಡಿಸಿದೆ. ಈ ಮಳೆಗೆ ಸಂಬಂಧಿಸಿದಂತೆ ಮುಂಬೈನಲ್ಲಿ ಸಂಭವಿಸಿದ 3ನೇ ಸಾವು ಇದಾಗಿದೆ.
ಗುರುವಾರ ಬೆಳಗ್ಗೆ ಸುಮಾರು 10.45ರ ಸುಮಾರಿಗೆ ಖೈರಾನಿ ರಸ್ತೆಯಲ್ಲಿ ಅಸ್ಲಾಂ ಇಸಾಕ್ ಶೇಖ್ ನಡೆದುಕೊಂಡು ಮನೆಗೆ ಹೋಗುತ್ತಿದ್ದರು. ಸುಮಾರು 25ರಿಂದ 30 ಅಡಿ ಆಳವಿದ್ದ ಈ ಮ್ಯಾನ್‌ಹೋಲ್ ಅನ್ನು ಪಾಲಿಕೆಯ ನಿರ್ವಹಣಾ ಕೆಲಸಗಳಿಗಾಗಿ ತೆರೆದಿಟ್ಟಿತ್ತು ಎಂದು ತಿಳಿದುಬಂದಿದೆ. ಕೆಲವೇ ದಿನಗಳ ಹಿಂದೆಯಷ್ಟೇ ಮುಂಬೈ ಮೇಯರ್ ರಿತು ತಾವ್ಡೆ ಅವರ ಸಮ್ಮುಖದಲ್ಲೇ ಪಾಲಿಕೆಯ ಪೌರಕಾರ್ಮಿಕರೊಬ್ಬರು ಮ್ಯಾನ್‌ಹೋಲ್‌ಗೆ ಬಿದ್ದ ಘಟನೆ ನಡೆದಿತ್ತು. ಅದರ ಬೆನ್ನಲ್ಲೇ ಈ ದುರಂತ ಸಂಭವಿಸಿರುವುದು ನಗರದ ಮುಂಗಾರು ಸಿದ್ಧತೆಗಳ ಕುರಿತು ಸಾರ್ವಜನಿಕರಲ್ಲಿ ತೀವ್ರ ಕಳವಳ ಮೂಡಿಸಿದೆ.
ಖಾಸಗಿ ಗುತ್ತಿಗೆಯ ಮೂವರು ಕಾರ್ಮಿಕರು ಅಲ್ಲಿನ ಒಳಚರಂಡಿ ನಿರ್ವಹಣಾ ಕೆಲಸ ಮಾಡುತ್ತಿದ್ದು, ಮ್ಯಾನ್‌ಹೋಲ್ ಮುಚ್ಚಳವನ್ನು ತೆಗೆದಿದ್ದರು. ಇದೇ ಸಮಯದಲ್ಲಿ ಅಸ್ಲಾಂ ಶೇಖ್ ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ರಸ್ತೆಯಲ್ಲಿ ಹೋಗುತ್ತಿದ್ದರು. ಆಗ ಮುನ್ನೆಚ್ಚರಿಕೆ ವಹಿಸದ ಅವರು ಆಕಸ್ಮಿಕವಾಗಿ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದಿದ್ದಾರೆ. ತಕ್ಷಣ ಗುತ್ತಿಗೆ ಕಾರ್ಮಿಕರು ಅವರನ್ನು ರಕ್ಷಿಸಲು ಮ್ಯಾನ್‌ಹೋಲ್ ಒಳಗಡೆ ಏಣಿಯನ್ನು ಇಳಿಸಿದ್ದರು. ಆದರೆ, ಅಷ್ಟರಲ್ಲೇ ಅವರು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದು, ಅವರ ಛತ್ರಿ ಮತ್ತು ಚಪ್ಪಲಿಗಳು ಮಾತ್ರ ಸಿಕ್ಕಿವೆ. ಒಳಚರಂಡಿಯಲ್ಲಿ ಮಳೆನೀರಿನ ಹರಿವು ತೀವ್ರವಾಗಿದ್ದರಿಂದ ಅವರು ಯಾವ ದಿಕ್ಕಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಆರಂಭದಲ್ಲಿ ಸಾಧ್ಯವಾಗಲಿಲ್ಲ.
ಈ ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಇತರ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿದರು. ಭಾರಿ ಮಳೆಯಿಂದಾಗಿ ಒಳಚರಂಡಿ ಜಾಲದಲ್ಲಿ ನೀರಿನ ರಭಸ ಹೆಚ್ಚಾಗಿದ್ದರಿಂದ ಶೇಖ್ ಅವರು ಪೈಪ್‌ಲೈನ್‌ನಲ್ಲಿ ಕೊಚ್ಚಿಹೋಗಿರಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು. ಇಂದು ಮಧ್ಯಾಹ್ನ 2.15ರ ಸುಮಾರಿಗೆ ಅಗ್ನಿಶಾಮಕ ಸಿಬ್ಬಂದಿ ಒಳಚರಂಡಿ ನೆಟ್‌ವರ್ಕ್ ಒಳಗಡೆ ಅವರ ಶವವನ್ನು ಪತ್ತೆಹಚ್ಚಿದ್ದು, ಅದನ್ನು ಹೊರತೆಗೆದಿದ್ದಾರೆ.