ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೂಲ್ಕಿಯ ಬಪ್ಪನಾಡು ಜಂಕ್ಷನ್ ಬಳಿ ಕಾರಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ, ಮೂಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿ ಬಸವರಾಜ್ (28) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಫಲಿಮಾರು ಕಡೆಯಿಂದ ಹಳೆಯಂಗಡಿಗೆ ಹೋಗುತ್ತಿದ್ದ ಎಲೆಕ್ಟ್ರಿಕ್ ಕಾರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೂಲ್ಕಿಯ ಬಪ್ಪನಾಡು ಜಂಕ್ಷನ್ ತಲುಪುತ್ತಿದ್ದಂತೆ, ಬಪ್ಪನಾಡು ದೇವಸ್ಥಾನ ಕಡೆಯಿಂದ ಮೂಲ್ಕಿ ಪೊಲೀಸ್ ಠಾಣೆ ಕಡೆಗೆ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಬಸವರಾಜ್ ಅವರ ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬಸವರಾಜ್ ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು ಕೂಡಲೆ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಮಂಗಳೂರು ಉತ್ತರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡ ಬಳಿಕ ಸರ್ವಿಸ್ ರಸ್ತೆ ಕಾಮಗಾರಿ ವಿಳಂಬದಿಂದ ಮೂಲ್ಕಿ, ಬಪ್ಪನಾಡು, ವಿಜಯ ಸನ್ನಿಧಿ ಜಂಕ್ಷನ್ ಬಳಿ ಅನೇಕ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೆ ಸರ್ವಿಸ್ ರಸ್ತೆ ಕಾಮಗಾರಿಗೆ ಚಾಲನೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
