ಮಂಗಳೂರು:
ನಗರದ ಮರ್ಕೇರಾ ಹಿಲ್‌ನಲ್ಲಿರುವ 139 ವರ್ಷಗಳ ಭವ್ಯ ಇತಿಹಾಸವಿರುವ ಐತಿಹಾಸಿಕ ಸಭಾಂಗಣವನ್ನು ಅತ್ಯಂತ ಸುಸಜ್ಜಿತ ಸಮುದಾಯ ಭವನವನ್ನಾಗಿ ಜೀರ್ಣೋದ್ಧಾರಗೊಳಿಸಿ ಲೋಕಾರ್ಪಣೆಗೊಳಿಸಲಾಗಿದೆ.
ಜೋನಾಸ್ ಪೆಟ್ರೋ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಸುನಿಲ್ ಜೋನಾಸ್ ಕುಟುಂಬಸ್ಥರು ತಮ್ಮ ಪೋಷಕರಾದ ದಿ. ಸೆಬಾಸ್ಟಿಯನ್ ಎಲಿಯಾ ಜೋನಸ್ ಹಾಗೂ ವಿ. ಸುಲೋಚನಿ ಜೋನಸ್ ಅವರ ಸ್ಮರಣಾರ್ಥವಾಗಿ ಈ ಐತಿಹಾಸಿಕ ಕಟ್ಟಡವನ್ನು ನವೀಕರಣಗೊಳಿಸಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಧರ್ಮಗುರುಗಳು, ಬಿಷಪ್ ಹಾಗೂ ಸಾರ್ವಜನಿಕರ ಉಪಸ್ಥಿತಿಯಲ್ಲಿ ನಡೆದ ವಿಶೇಷ ಪ್ರಾರ್ಥನೆಯೊಂದಿಗೆ ನೂತನ ಭವನ ಉದ್ಘಾಟನೆಗೊಂಡಿತು.
ಪರಂಪರೆಯ ಮರುಸೃಷ್ಟಿ: ಡಾ. ಡೆಕ್ಸ್ಟರ್ ಎಸ್. ಮಾಬೆನ್ ಶ್ಲಾಘನೆ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಬೆಂಗಳೂರಿನ ಸಿ.ಎಸ್.ಐ. ಡೇವಿಡ್ ಮೆಮೋರಿಯಲ್ ಚರ್ಚ್‌ನ ಮುಖ್ಯಸ್ಥ ಡಾ. ಡೆಕ್ಸ್ಟರ್ ಎಸ್. ಮಾಬೆನ್, "1834ರಷ್ಟು ಹಿಂದೆಯೇ ನಿರ್ಮಾಣಗೊಂಡಿದ್ದ ಈ ಕಟ್ಟಡವು ತನ್ನ ಸುದೀರ್ಘ ಇತಿಹಾಸದಲ್ಲಿ ಶಾಲೆ, ಪ್ರಾರ್ಥನಾ ಮಂದಿರ ಹಾಗೂ ಧರ್ಮಗುರುಗಳ ನಿವಾಸವಾಗಿ ಕಾರ್ಯನಿರ್ವಹಿಸಿತ್ತು. ಕಳೆದ ಕೆಲವು ದಶಕಗಳಿಂದ ಬಳಕೆಯಿಲ್ಲದೆ ಸೊರಗಿದ್ದ ಈ ಐತಿಹಾಸಿಕ ರಚನೆಯನ್ನು ಜೋನಾಸ್ ಕುಟುಂಬವು ಜೀರ್ಣೋದ್ಧಾರಗೊಳಿಸಿರುವುದು ಸುಶಾಂತಿ ನಿಲಯದ ಭವ್ಯ ಇತಿಹಾಸಕ್ಕೆ ಸಲ್ಲಿಸಿದ ಗೌರವ ಹಾಗೂ ಸಮುದಾಯದ ಪರಂಪರೆಯ ಮರುಸೃಷ್ಟಿಯಾಗಿದೆ" ಎಂದರು.
ಮುಂದುವರಿದು ಮಾತನಾಡಿದ ಅವರು, "ಧರ್ಮಪ್ರಾಂತ್ಯದಲ್ಲಾಗಲೀ ಅಥವಾ ಸ್ಥಳೀಯ ಚರ್ಚ್‌ನಲ್ಲಾಗಲೀ ಯಾವುದೇ ಅಧಿಕೃತ ಅಧಿಕಾರ ಅಥವಾ ಹುದ್ದೆ ಹೊಂದಿಲ್ಲದಿದ್ದರೂ ಸುನಿಲ್ ಜೋನಾಸ್ ಅವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಉದಾರವಾಗಿ ದೇಣಿಗೆ ನೀಡಿ ಈ ಭವ್ಯ ಕಟ್ಟಡವನ್ನು ಮರುನಿರ್ಮಾಣ ಮಾಡಿದ್ದಾರೆ. ಅವರ ಈ ನಿಸ್ವಾರ್ಥ ಕೊಡುಗೆ ನಿಜಕ್ಕೂ ಅನುಕರಣೀಯ ಹಾಗೂ ಶ್ಲಾಘನೀಯ" ಎಂದು ಪ್ರಶಂಸಿಸಿದರು.
ಹಲವು ತಲೆಮಾರುಗಳ ವಿಶ್ವಾಸದ ಪ್ರತೀಕ: ಬಿಷಪ್ ರೆ. ಹೇಮಚಂದ್ರ ಕುಮಾರ್
ಭವನದ ಉದ್ಘಾಟನಾ ಪ್ರಾರ್ಥನಾ ವಿಧಿ ನೆರವೇರಿಸಿದ ದಕ್ಷಿಣ ಭಾರತ ಚರ್ಚ್‌ನ (ಸಿಎಸ್ಐ ಕೆ.ಎಸ್.ಡಿ) ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಷಪ್ ರೆ. ಹೇಮಚಂದ್ರ ಕುಮಾರ್ ಅವರು, "ಇದು ಕೇವಲ ಕಲ್ಲು-ಇಟ್ಟಿಗೆಗಳಿಂದ ನಿರ್ಮಿಸಲಾದ ಕಟ್ಟಡವಲ್ಲ; ಬದಲಾಗಿ ಕಳೆದ ಹಲವು ತಲೆಮಾರುಗಳ ಅಚಲ ವಿಶ್ವಾಸ ಮತ್ತು ಭಕ್ತಿಗೆ ಸಾಕ್ಷಿಯಾಗಿ ನಿಂತಿರುವ ಪವಿತ್ರ ತಾಣ" ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸುಶಾಂತಿ ನಿಲಯದ ಸಭಾಪಾಲಕರಾದ ರೆ. ಸಂತೋಷ್ ಕುಮಾರ್ ಸಿಂಗ್, ಸುನಿಲ್ ಜೋನಾಸ್, ಸಂಧ್ಯಾ ಜೋನಾಸ್ ಹಾಗೂ ಕುಟುಂಬಸ್ಥರು, ವಿವಿಧ ಗಣ್ಯರು ಮತ್ತು ಸಮುದಾಯದ ಬಾಂಧವರು ಉಪಸ್ಥಿತರಿದ್ದರು.