ಕಂಕನಾಡಿ ಠಾಣೆ ಪೊಲೀಸರಿಂದ ಚಾಣಾಕ್ಷ ಕಾರ್ಯಾಚರಣೆ; ತಲಪಾಡಿ ಬಸ್ ಸ್ಟ್ಯಾಂಡ್ ಬಳಿ ಸಿಕ್ಕಿಬಿದ್ದ ಆರೋಪಿ!
ಮಂಗಳೂರು:
ನಗರದ ಜೆಪ್ಪಿನಮೊಗರಿನಲ್ಲಿ ಮನೆ ಕಳವು ನಡೆಸಿ ಪರಾರಿಯಾಗಿದ್ದ ಮಹಾರಾಷ್ಟ್ರ ಮೂಲದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸ್ ಠಾಣೆಯ ವಿಶೇಷ ಪಡೆ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ನರಳೆವಾಡಿ ನಿವಾಸಿ ಸಮಧನ ಸಕಹರಿ ನರಳೆ (26) ಬಂಧಿತ ಯುವಕ.
ಮನೆಯಲ್ಲ ಯಾರೂ ಇಲ್ಲದ ವೇಳೆ ಕನ್ನ:
ಆಗಸ್ಟ್ 4, 2026 ರಂದು ಜೆಪ್ಪಿನಮೊಗರಿನಲ್ಲಿರುವ ನಿವಾಸದ ಸಾಹುಕಾರರು ಹೊರಗೆ ತೆರಳಿದ್ದಾಗ, ಮನೆಯ ಮುಂಭಾಗದ ಬಾಗಿಲಿನ ಬೀಗವನ್ನು ಆಯುಧದಿಂದ ಮುರಿದು ಒಳಪ್ರವೇಶಿಸಿದ ಆರೋಪಿ ಕಪಾಟಿನಲ್ಲಿದ್ದ 14 ಗ್ರಾಂ ಚಿನ್ನದ ಸರ, 2 ಗ್ರಾಂ ತೂಕದ ಎರಡು ಉಂಗುರಗಳು ಹಾಗೂ 25,000 ರೂಪಾಯಿ ನಗದು ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ (Crime No: 106/2026) ಪ್ರಕರಣ ದಾಖಲಾಗಿತ್ತು.
ತಲಪಾಡಿ ಬಳಿ ಖೆಡ್ಡಾಗೆ ಬಿದ್ದ ಕಳ್ಳ:
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ನಗರ ಪೊಲೀಸ್ ಕಮಿಷನರೇಟ್ ನೇತೃತ್ವದಲ್ಲಿ ಕಂಕನಾಡಿ ಠಾಣೆಯ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಕಳ್ಳನ ಸುಳಿವು ಬೆನ್ನತ್ತಿದ್ದ ಪೊಲೀಸರಿಗೆ ಆಗಸ್ಟ್ 11 ರಂದು ಆರೋಪಿಯು ತಲಪಾಡಿ ಬಸ್ ನಿಲ್ದಾಣದ ಬಳಿ ಸುಳಿದಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತನಿಂದ ಕಳವು ಮಾಡಲಾಗಿದ್ದ ಸಂಪೂರ್ಣ ಬಂಗಾರ, ನಗದು ಹಾಗೂ ಕಳವಿಗೆ ಬಳಸಿದ್ದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ (ಜುಡಿಷಿಯಲ್ ಕಸ್ಟಡಿ) ವಿಧಿಸಿದೆ ಎಂದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
