ಅಗ್ನಿಪಥ್ ಯೋಜನೆ ಅಡಿಯಲ್ಲಿ ಸೇನೆಗೆ ಸೇರ್ಪಡೆ; ಬಣ್ಣದ ಲೋಕಕ್ಕಿಂತ ದೇಶ ಸೇವೆಯೇ ಮುಖ್ಯ ಎಂದ ನಟನ ಮಗಳು!
ನವದೆಹಲಿ:
ಖ್ಯಾತ ಭೋಜಪುರಿ ಹಾಗೂ ಬಾಲಿವುಡ್ ನಟ, ಹಾಲಿ ಸಂಸದ ರವಿ ಕಿಶನ್ ಅವರ ಕಿರಿಯ ಪುತ್ರಿ ಇಶಿತಾ ಶುಕ್ಲಾ (24) ಅವರು ಸಿನಿರಂಗದ ಗ್ಲಾಮರ್, ವೈಭವದ ಜೀವನವನ್ನು ಬದಿಗೊತ್ತಿ ಭಾರತೀಯ ರಕ್ಷಣಾ ಪಡೆಗೆ ಸೇರುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.
ತಂದೆ ಚಿತ್ರರಂಗ ಹಾಗೂ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿದ್ದರೂ, ಅವರ ಹಾದಿಯನ್ನೇ ತುಳಿಯದೆ ಬಾಲ್ಯದಿಂದಲೂ ದೇಶ ಸೇವೆಯನ್ನೇ ತಮ್ಮ ಕನಸಾಗಿಸಿಕೊಂಡಿದ್ದ ಇಶಿತಾ, ಇದೀಗ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಯಾರೀ ಇಶಿತಾ ಶುಕ್ಲಾ?:
24 ವರ್ಷದ ಇಶಿತಾ ಶುಕ್ಲಾ ನಟ ರವಿ ಕಿಶನ್ ಅವರ ಕಿರಿಯ ಮಗಳು. ಎನ್‌ಸಿಸಿ (NCC) ಕೆಡೆಟ್ ಆಗಿ ಕಠಿಣ ತರಬೇತಿ ಪಡೆದಿದ್ದ ಇಶಿತಾ, 2023 ರಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನ ಸಿದ್ಧತೆಗಳಲ್ಲಿ ಭಾಗವಹಿಸಿ ತಮ್ಮ ಶಿಸ್ತು ಹಾಗೂ ದೇಶಪ್ರೇಮವನ್ನು ಪ್ರದರ್ಶಿಸಿದ್ದರು.
ಬಳಿಕ ಭಾರತೀಯ ಸಶಸ್ತ್ರ ಪಡೆಗಳಿಗೆ ಯುವಕರನ್ನು ಸೇರ್ಪಡೆಗೊಳಿಸುವ ಕೇಂದ್ರ ಸರ್ಕಾರದ ಸಾಹಸಮಯ 'ಅಗ್ನಿಪಥ್' (Agnipath Scheme) ಯೋಜನೆಯಡಿ ತರಬೇತಿ ಪಡೆದು ಭಾರತೀಯ ಸೇನೆಗೆ ನಿಯೋಜನೆಗೊಂಡಿದ್ದಾರೆ. ಮಗಳು ಸೇನೆ ಸೇರುತ್ತಿದ್ದಂತೆ ತಂದೆ ರವಿ ಕಿಶನ್ ಅವರು ಅತ್ಯಂತ ಭಾವುಕರಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೆಮ್ಮೆಯನ್ನು ಹಂಚಿಕೊಂಡಿದ್ದರು.
ಚಲನಚಿತ್ರ ರಂಗದ ನಂಟು ಇದ್ದರೂ ದೇಶ ಸೇವೆಗೆ ಆದ್ಯತೆ!
ಸಾಮಾನ್ಯವಾಗಿ ಚಿತ್ರರಂಗದ ತಾರೆಯರ ಮಕ್ಕಳು ಬಣ್ಣದ ಲೋಕಕ್ಕೋ ಅಥವಾ ಗ್ಲಾಮರಸ್ ಜಗತ್ತಿಗೋ ಕಾಲಿಡುವುದು ಹೆಚ್ಚು. ಆದರೆ ರವಿ ಕಿಶನ್ ಅವರ ಕುಟುಂಬಕ್ಕೆ ಬಾಲಿವುಡ್ ಜೊತೆ ನಿಕಟ ಸಂಪರ್ಕವಿದ್ದರೂ, ಇಶಿತಾ ಮಾತ್ರ ರಕ್ಷಣಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದು ದೇಶಾದ್ಯಂತ ದೊಡ್ಡ ಪ್ರಶಂಸೆಗೆ ಪಾತ್ರವಾಗಿದೆ.
ರವಿ ಕಿಶನ್ ಅವರಿಗೆ ಇಶಿತಾ ಹೊರತಾಗಿ ಸಕ್ಷಮ್, ತನಿಷ್ಕ್ ಹಾಗೂ ರಿವಾ ಎಂಬ ಮೂವರು ಮಕ್ಕಳಿದ್ದಾರೆ. ಇವರಲ್ಲಿ ರಿವಾ ಶುಕ್ಲಾ ತಮ್ಮ ತಂದೆಯಂತೆ ಸಿನಿರಂಗದಲ್ಲೇ ಮುಂದುವರಿಯುವ ಆಸಕ್ತಿ ಹೊಂದಿದ್ದು, ಇತ್ತೀಚೆಗೆ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ತೆರೆಕಂಡ 'ಅಲೈಯನ್ಸ್' (Alliance) ರಿಯಾಲಿಟಿ ಸರಣಿಯಲ್ಲಿ ಕಾಣಿಸಿಕೊಂಡಿದ್ದರು.
ಆದರೆ ಕಿರಿಯ ಮಗಳು ಇಶಿತಾ ತಂದೆಯಂತೆಯೇ ದೇಶಸೇವೆಯ ಹಾದಿ ಹಿಡಿದು ಸೇನೆಗೆ ಸೇರ್ಪಡೆಯಾಗಿರುವುದು ಕೋಟ್ಯಂತರ ಯುವಜನತೆಗೆ ಹಾಗೂ ಹೆಣ್ಣುಮಕ್ಕಳಿಗೆ ಪ್ರೇರಣೆಯಾಗಿದೆ.
