WhatsApp Plus ಸಬ್‌ಸ್ಕ್ರಿಪ್ಷನ್ ಹವಾ ಶುರು! ತಿಂಗಳಿಗೆ ₹79: ಲಾಭವೇನು, ಮೆಟಾ ಆರಂಭಿಸಿದ್ದೇಕೆ?
| ಸುದ್ದಿ ಮೂಲ: ETV Bharat
ಬೆಂಗಳೂರು: ಇನ್ಸ್ಟಂಟ್ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಬಳಸುವ ಕೋಟ್ಯಂತರ ಬಳಕೆದಾರರಿಗೆ ಮೆಟಾ ಕಂಪನಿಯಿಂದ ಒಂದು ಮಹತ್ವದ ಸುದ್ದಿಯೊಂದು ಬಂದಿದೆ. ವಾಟ್ಸಾಪ್ ಈಗ ಭಾರತದಲ್ಲಿ ತನ್ನ ಹೊಸ ಪ್ರೀಮಿಯಂ ಸೇವೆಯಾದ 'ವಾಟ್ಸಾಪ್ ಪ್ಲಸ್' (WhatsApp Plus) ಅನ್ನು ಪರಿಚಯಿಸಿದೆ. ಇದು ಮೊಬೈಲ್ ಮತ್ತು ವೆಬ್ ಬಳಕೆದಾರರಿಗಾಗಿ ಲಭ್ಯವಿರುವ ಚಂದಾದಾರಿಕೆ ಆಧಾರಿತ ಸೇವೆಯಾಗಿದೆ.
ಉಚಿತ ಸೇವೆ ಮುಂದುವರಿಕೆ
ಗಮನಿಸಿ, ಈ ಹೊಸ ಸೇವೆಯು ಸಂಪೂರ್ಣವಾಗಿ ಐಚ್ಛಿಕವಾಗಿದೆ. ನೀವು ಪಾವತಿಸಲು ಇಚ್ಛಿಸದಿದ್ದರೆ, ನಿಮ್ಮ ಸಾಮಾನ್ಯ ವಾಟ್ಸಾಪ್ ಸೇವೆಯು ಮೊದಲಿನಂತೆಯೇ ಉಚಿತವಾಗಿ ಮುಂದುವರಿಯುತ್ತದೆ. ಚಾಟಿಂಗ್ ಅನುಭವವನ್ನು ಹೆಚ್ಚು ವೈಯಕ್ತೀಕರಿಸಲು (Personalize) ಬಯಸುವ ಬಳಕೆದಾರರಿಗಾಗಿ ಕಂಪನಿ ಈ ಆಯ್ಕೆಯನ್ನು ನೀಡಿದೆ.
WhatsApp Plus ನಲ್ಲೇನಿದೆ ವಿಶೇಷ?
ವಾಟ್ಸಾಪ್ ಪ್ಲಸ್ ಚಂದಾದಾರರಾಗುವವರಿಗೆ ಸಿಗುವ ವಿಶೇಷ ವೈಶಿಷ್ಟ್ಯಗಳು ಹೀಗಿವೆ:
- ಕಸ್ಟಮ್ ಥೀಮ್‌ಗಳು ಮತ್ತು ಐಕಾನ್‌ಗಳು: ನಿಮ್ಮ ವಾಟ್ಸಾಪ್ ಥೀಮ್ ಹಾಗೂ ಐಕಾನ್ ಶೈಲಿಯನ್ನು ನಿಮಗೆ ಬೇಕಾದಂತೆ ಬದಲಾಯಿಸಬಹುದು.
- ವಿಶೇಷ ಸ್ಟಿಕ್ಕರ್‌ಗಳು ಮತ್ತು ರಿಂಗ್‌ಟೋನ್‌ಗಳು: ಸಾಮಾನ್ಯ ಬಳಕೆದಾರರಿಗೆ ಸಿಗದ ಎಕ್ಸ್‌ಕ್ಲೂಸಿವ್ ಸ್ಟಿಕ್ಕರ್‌ಗಳು ಮತ್ತು ರಿಂಗ್‌ಟೋನ್‌ಗಳ ಬಳಕೆ.
- ಚಾಟ್ ಲಿಸ್ಟ್ ಅಪ್‌ಗ್ರೇಡ್: ಚಾಟ್‌ಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹೊಸ ಫೀಚರ್.
- ಹೆಚ್ಚಿದ ಪಿನ್ನಿಂಗ್ ಲಿಮಿಟ್: ನೀವು ಇಷ್ಟಪಡುವ ಸ್ನೇಹಿತರು ಅಥವಾ ಗುಂಪುಗಳನ್ನು ಚಾಟ್ ಲಿಸ್ಟ್‌ನ ಮೇಲ್ಭಾಗದಲ್ಲಿ ಪಿನ್ ಮಾಡುವ ಮಿತಿಯನ್ನು 20 ಚಾಟ್‌ಗಳಿಗೆ ಏರಿಸಲಾಗಿದೆ.
ಬೆಲೆ ಮತ್ತು ಸಕ್ರಿಯಗೊಳಿಸುವ ವಿಧಾನ
ಭಾರತದಲ್ಲಿ WhatsApp Plus ತಿಂಗಳಿಗೆ 79 ರೂಪಾಯಿ ದರದಲ್ಲಿ ಲಭ್ಯವಿದೆ. ಕಂಪನಿಯು ಮೊದಲ ಒಂದು ತಿಂಗಳು ಉಚಿತ ಪ್ರಯೋಗವನ್ನು (Free Trial) ನೀಡುತ್ತಿದೆ. ಪ್ರಯೋಗದ ಅವಧಿ ಮುಗಿದ ನಂತರ ಚಂದಾದಾರಿಕೆ ಆಟೋ-ರಿನ್ಯೂ ಆಗುವುದರಿಂದ, ಮುಂದುವರಿಸಲು ಇಚ್ಛಿಸದಿದ್ದಲ್ಲಿ ಸಕಾಲದಲ್ಲಿ ರದ್ದುಗೊಳಿಸಬೇಕು.
ಸಕ್ರಿಯಗೊಳಿಸುವುದು ಹೇಗೆ? ವಾಟ್ಸಾಪ್ ಓಪನ್ ಮಾಡಿ -> ಸೆಟ್ಟಿಂಗ್ಸ್ ಹೋಗಿ -> 'ಚಂದಾದಾರಿಕೆಗಳು' (Subscriptions) ಆಯ್ಕೆಯನ್ನು ಆರಿಸಿ -> 'WhatsApp Plus' ಮೇಲೆ ಟ್ಯಾಪ್ ಮಾಡಿ ಉಚಿತ ಪ್ರಯೋಗವನ್ನು ಪ್ರಾರಂಭಿಸಬಹುದು.
ಮೆಟಾ ಈ ಶುಲ್ಕ ವಿಧಿಸಿದ್ದೇಕೆ?
ಮೆಟಾ ಕಂಪನಿಯು ಪ್ರಸ್ತುತ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಭಾರಿ ಹೂಡಿಕೆ ಮಾಡುತ್ತಿದೆ. ವಾಟ್ಸಾಪ್‌ನಲ್ಲಿ ನೀವು ಗಮನಿಸಿರುವ ಬ್ಲೂ ಕಲರ್ 'ಮೆಟಾ ಎಐ' ಸರ್ಕಲ್ ನಿರ್ವಹಣೆ ಮತ್ತು ಅಭಿವೃದ್ಧಿಗೆ ಅಗತ್ಯವಿರುವ ವೆಚ್ಚವನ್ನು ಸರಿದೂಗಿಸಲು ಮತ್ತು ಹೊಸ ಆದಾಯದ ಮೂಲವನ್ನು ಸೃಷ್ಟಿಸಲು ಕಂಪನಿ ಈ ಪ್ರೀಮಿಯಂ ಮಾದರಿಯನ್ನು ಪರಿಚಯಿಸಿದೆ.