ಬಿಟ್ಟುಹೋದ ಪತ್ನಿಯ ವಿಚಾರದಲ್ಲಿ ಅಪಪ್ರಚಾರಕ್ಕೆ ಕೊಲೆ: ಬಿಹಾರದ ಇಬ್ಬರ ಬಂಧನ
ಚಿತ್ರ: ಆರೋಪಿಗಳ ಬಂಧನ
ಮಂಗಳೂರು: ಮನೆ ಬಿಟ್ಟು ಹೋದ ಪತ್ನಿಯ ವಿಚಾರದಲ್ಲಿ ತನ್ನ ವಿರುದ್ಧವೇ ಅಪಪ್ರಚಾರ ಮಾಡುತ್ತಿದ್ದನೆಂಬ ಕೋಪಕ್ಕೆ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿ ತೋಡಿಗೆ ಎಸೆದಿದ್ದ ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಪಣಂಬೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಬಿಹಾರ ರಾಜ್ಯದ ದರ್ಬಾಂಗಾ ಜಿಲ್ಲೆಯ ಪ್ರಶಾಂತ್ ಕುಮಾರ್ (36) ಮತ್ತು ವೈಶಾಲಿ ಜಿಲ್ಲೆಯ ಪಿಂಕೂ ಮಹ್ತೋ (33) ಬಂಧಿತ ಆರೋಪಿಗಳು. ಇವರಿಬ್ಬರೂ ಸದ್ಯ ಜೋಕಟ್ಟೆಯ ವಿಜಯ ವಿಠಲ ಭಜನಾ ಮಂದಿರದ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮೃತನನ್ನು ಬಿಹಾರದ ಪೂರ್ನಿಯಾ ಜಿಲ್ಲೆಯ ಚಂದನ್ ಚೌಹಾನ್ (39) ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಜೂನ್ 10 ರಂದು ಬೆಳಿಗ್ಗೆ ಜೋಕಟ್ಟೆಯ ಅರಿಕೆರೆ ಎಂಬಲ್ಲಿ MSEZ (ಮಂಗಳೂರು ವಿಶೇಷ ಆರ್ಥಿಕ ವಲಯ) ಗೆ ಸೇರಿದ ನೀರು ಹರಿಯುವ ತೋಡಿನಲ್ಲಿ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿತ್ತು. ಈ ಬಗ್ಗೆ ಕಿಶೋರ್ ಎಂಬವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅಪರಾಧ ಕ್ರಮಾಂಕ: 82/2026, ಕಲಂ: 103(1) ಬಿ.ಎನ್.ಎಸ್) ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೃತನ ಗುರುತು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.
ಕೊಲೆಗೆ ಕಾರಣವೇನು?
ಮೊದಲ ಆರೋಪಿ ಪ್ರಶಾಂತ್ ಕುಮಾರ್‌ನ ಪತ್ನಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ಇನ್ನೊಬ್ಬ ಯುವಕನ ಜೊತೆ ಮನೆ ಬಿಟ್ಟು ಓಡಿಹೋಗಿದ್ದಳು. ಆಕೆ ಓಡಿಹೋಗಲು ಮೃತ ಚಂದನ್ ಚೌಹಾನ್ ಸಹಾಯ ಮಾಡಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಪ್ರಶಾಂತ್ ಕುಮಾರ್ ಅಪಘಾತಕ್ಕೀಡಾಗಿ ಮನೆಯಲ್ಲೇ ಇರುವುದನ್ನು ಬಳಸಿಕೊಂಡು, ಆತನ ಪತ್ನಿ ಸಣ್ಣ ಹುಡುಗನ ಜೊತೆ ಓಡಿಹೋಗಿದ್ದಾಳೆ" ಎಂದು ಚಂದನ್ ಎಲ್ಲೆಂದರಲ್ಲಿ ಅಪಪ್ರಚಾರ ನಡೆಸುತ್ತಿದ್ದ. ಇದರಿಂದ ತೀವ್ರ ಆಕ್ರೋಶಗೊಂಡಿದ್ದ ಪ್ರಶಾಂತ್, ಚಂದನ್‌ನನ್ನು ಮುಗಿಸಲು ಸಂಚು ರೂಪಿಸಿದ್ದ.
ಭೀಕರ ಹತ್ಯೆ ಮತ್ತು ಬಂಧನ:
ಜೂನ್ 9 ರಂದು ಸಂಜೆ 6 ಗಂಟೆಯ ಸುಮಾರಿಗೆ ಪ್ರಶಾಂತ್ ಕುಮಾರ್ ತನ್ನ ಸ್ನೇಹಿತ ಪಿಂಕೂ ಮಹ್ತೋ ಜೊತೆಗೂಡಿ ಚಂದನ್‌ನ ತಲೆ ಮತ್ತು ಮುಖಕ್ಕೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾನೆ. ಬಳಿಕ ಚಾಕುವಿನಿಂದ ಕುತ್ತಿಗೆ ಕೊಯ್ದು ಭೀಕರವಾಗಿ ಕೊಲೆ ಮಾಡಿದ್ದಾನೆ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಕಾಲುವೆಗೆ ಎಸೆದು ಪರಾರಿಯಾಗಿದ್ದರು. ಪ್ರಮುಖ ಆರೋಪಿ ಪ್ರಶಾಂತ್ ಕುಮಾರ್ ಗೋವಾಕ್ಕೆ ಪರಾರಿಯಾಗಿದ್ದು, ಪೊಲೀಸರು ಜೂನ್ 13 ರಂದು ಆತನನ್ನು ಗೋವಾದ ಮಡಗಾಂವ್ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದರು. ಮತ್ತೊಬ್ಬ ಆರೋಪಿ ಪಿಂಕೂ ಮಹ್ತೋನನ್ನು ಅಂದೇ ಜೋಕಟ್ಟೆಯಲ್ಲಿ ಬಂಧಿಸಲಾಗಿದೆ.
ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ, ಪಣಂಬೂರು ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.